ಪಾಲಿಕೆಗಳ ನಿವೃತ್ತ ನೌಕರರ ಒಕ್ಕೂಟ ರಚನೆ

ಪಾಲಿಕೆಗಳ ನಿವೃತ್ತ ನೌಕರರ ಒಕ್ಕೂಟ ರಚನೆ

ಕಲಬುರಗಿ, ಸೆ. 12- ಮಹಾನಗರ ಪಾಲಿಕೆಗಳ ನಿವೃತ್ತ ನೌಕರರ ಸಂಘಗಳ ಪದಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯ ಮಹಾನಗರ ಪಾಲಿಕೆಗಳ ನಿವೃತ್ತ ನೌಕರರ ಸಂಘಗಳ ಒಕ್ಕೂಟವನ್ನು ರಚಿಸಲಾಯಿತು.

ಒಕ್ಕೂಟದ ಅಧ್ಯಕ್ಷರಾಗಿ ವೀರಭದ್ರ ಸಿಂಪಿ (ಕಲಬುರಗಿ), ಉಪಾಧ್ಯಕ್ಷರಾಗಿ ಹೆಚ್.ಆರ್. ದೇವೇಂದ್ರಪ್ಪ (ಶಿವಮೊಗ್ಗ), ವೈ.ಜಿ. ಸಕ್ರಿ (ವಿಜಯಪುರ) ಮತ್ತು ಜಗನ್ನಾಥ ಶೆಟ್ಟಿ (ಮಂಗಳೂರು), ಕಾರ್ಯದರ್ಶಿಯಾಗಿ ಅಕ್ರಮ್ ಅಹ್ಮದ್ (ವಿಜಯಪುರ), ಖಜಾಂಚಿಯಾಗಿ ಶ್ರೀಕಾಂತ್ ಶೆಟ್ಟಿ (ಕಲಬುರಗಿ), ಸಂಘಟನಾ ಕಾರ್ಯದರ್ಶಿಯಾಗಿ ಶೇಖರ ಪೂಜಾರಿ (ಬೆಳಗಾವಿ), ಸೈಯದ್ ಪೀರ್ (ದಾವಣಗೆರೆ) ಹಾಗೂ ಜೆ. ರಾಮಾಂಜನೇಯಲು (ಬಳ್ಳಾರಿ) ಅವರು ಆಯ್ಕೆಯಾಗಿದ್ದಾರೆ.

ಬಿಬಿಎಂಸಿ ಹೊರತುಪಡಿಸಿ ರಾಜ್ಯದಲ್ಲಿ 10 ಮಹಾನಗರ  ಪಾಲಿಕೆಗಳಿವೆ. ಮೈಸೂರಿನ್ಲಲಿ ನಿವೃತ್ತ ನೌಕರರ ಸಂಘಟನೆ ಇಲ್ಲ. ತುಮಕೂರು ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಲ್ಲಿ ಪದಾಧಿಕಾರಿಗಳು ಕಾರಣಾಂತರಗಳಿಂದ ಪಾಲ್ಗೊಂಡಿಲ್ಲ. ಮುಂದಿನ ದಿನಗಳಲ್ಲಿ ಭಾಗವಹಿಸುವರು. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ನಿವೃತ್ತ ನೌಕರರಿಗೆ ಶೇ. 17ರಷ್ಟು ಮಧ್ಯಂತರ ಪರಿಹಾರ ವೇತನ ಜಮಾ, ಆರೋಗ್ಯ ಸಂಜೀವಿನಿ ಯೋಜನೆ ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮಾಡಲಾಗುವುದು ಎಂದು ನೂತನ ಅಧ್ಯಕ್ಷ ಸಿಂಪಿ ಹೇಳಿದರು.

ಕೆಸಿಎಸ್ಆರ್ ನಿಯಮದಂತೆ ನೇಮಿಸಿ ಕೊಂಡು, ನಿವೃತ್ತಿಯ ಬಳಿಕ ಪಿಂಚಣಿಯಂತೆ ಸೌಲಭ್ಯ ಕೊಡುತ್ತಿಲ್ಲ. ಪಾಲಿಕೆಯ ಎಲ್ಲಾ ಕೆಲಸಗಳಿಗೆ ಬಳಸಿಕೊಂಡು, ನಿವೃತ್ತಿಯ ನಂತರ ಕಡೆಗಣಿಸುತ್ತಿದ್ದಾರೆ. ನಾವು ಸಹ ಸರ್ಕಾರಿ ನೌಕರರಾಗಿದ್ದು, ಇತರೆ ಇಲಾಖೆಗಳ ನಿವೃತ್ತರಿಗೆ ಸಿಗುವ ಸೌಕರ್ಯಗಳನ್ನು ನಮಗೂ ಕಲ್ಪಿಸ ಬೇಕು. ಆದರೆ, ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ನಿವೃತ್ತರಾದ ಬಹುತೇಕರು ಹಲವು ಕಾಯಿ ಲೆಗಳಿಂದ ಬಳಲುತ್ತಿದ್ದಾರೆ. ಬೆಲೆ  ಏರಿಕೆಯ  ಇಂದಿನ ದಿನಗಳಲ್ಲಿ ವೈದ್ಯರ ತಪಾಸಣೆ, ಔಷಧಿಗಳ ವೆಚ್ಚವನ್ನು ಭರಿಸಲಾಗುತ್ತಿಲ್ಲ. ಹೀಗಾಗಿ ಆರೋಗ್ಯ ಸಂಜೀವಿನಿ ಯೋಜನೆಯನ್ನು ನಮಗೂ ಕಲ್ಪಿಸಬೇಕು. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು. ಹಂತ ಹಂತವಾಗಿ  ಹೋರಾಟ ರೂಪಿಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ವಿವಿಧ ಪಾಲಿಕೆಗಳ ಪದಾಧಿಕಾರಿಗಳಾದ ಹೊನ್ನೂರಪ್ಪ, ಎನ್.ಆರ್. ಮಠ, ಎಸ್.ಬಿ. ನಾಗನಗೌಡ, ಗುರುಮೂರ್ತಿ, ಹೆಚ್.ಆರ್. ದೇವೇಂದ್ರಪ್ಪ, ಲೋಕಯ್ಯ, ರಮೇಶ ದಾವಣಗೆರೆ ಉಪಸ್ಥಿತರಿದ್ದರು.

error: Content is protected !!