ಹರಿಹರ ನಗರಸಭೆ ಆಡಳಿತ ಸದಸ್ಯರಿಂದಲೇ ಪೌರಾಯುಕ್ತರ ಕಚೇರಿ ಮುಂದೆ ಪ್ರತಿಭಟನೆ

ಹರಿಹರ ನಗರಸಭೆ ಆಡಳಿತ ಸದಸ್ಯರಿಂದಲೇ ಪೌರಾಯುಕ್ತರ ಕಚೇರಿ ಮುಂದೆ ಪ್ರತಿಭಟನೆ

ಹರಿಹರ, ಸೆ. 12 – ಕೈಗೆ ಸಿಗದ ಅಧಿಕಾರಿಗಳು, ಅತ್ಯಧಿಕವಾಗಿ ಬರುತ್ತಿರುವ ಜಲಸಿರಿ ನೀರಿನ ಬಿಲ್, ಹೆಚ್ಚುವರಿ ಜಕಾತಿ ವಸೂಲಿ ಇಂತಹ ವಿವಿಧ ಆರೋಪಗಳನ್ನು ಮಾಡಿದ ಆಡಳಿತಾರೂಢ ಗುಂಪಿನ ಸದಸ್ಯರೇ ನಗರಸಭೆ ಅಧ್ಯಕ್ಷರು, ಪೌರಾಯುಕ್ತರ ಕಚೇರಿ ಮುಂದೆ ಕುಳಿತು ಪ್ರತಿಭಟಿಸಿದ ಘಟನೆ ನಿನ್ನೆ ನಡೆಯಿತು.

ಆಡಳಿತ ಗುಂಪಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಲವು ನಗರಸಭಾ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹಿರಿಯ ಸದಸ್ಯ ಎ.ವಾಮನಮೂರ್ತಿ ಮಾತನಾಡಿ, ಪೌರಾಯುಕ್ತರ ಸೂಚನೆಗಳನ್ನು ಅವರ ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ಕೇಳುತ್ತಿಲ್ಲ ಎಂದರು.

ಜಿಲ್ಲಾಧಿಕಾರಿಗಳ ಕಚೇರಿ ಸಭೆಯಲ್ಲಿದ್ದೇನೆ ಎನ್ನುವ ಪೌರಾಯುಕ್ತರನ್ನು ಭೇಟಿ ಮಾಡುವುದು ದುಸ್ತರವಾಗಿದೆ. ಕೇಂದ್ರ ಸ್ಥಾನದಲ್ಲೇ ವಾಸವಿರಬೇಕೆಂಬ ನಿಯಮ ಪಾಲನೆಯಾಗುತ್ತಿಲ್ಲ. ನಗರಸಭೆಯ ಬಹುತೇಕ ಉನ್ನತ ಹಾಗೂ ಅಧೀನ ಅಧಿಕಾರಿಗಳು ದಾವಣಗೆರೆಯಲ್ಲಿ ವಾಸಿಸುತ್ತಿದ್ದು, ನಗರದಲ್ಲಿ ಸ್ವಚ್ಚತೆ ಇಲ್ಲವಾಗಿ ಗಬ್ಬೆದ್ದು ನಾರುತ್ತಿದೆ, ಆಡಳಿತ ಹಾದಿ ತಪ್ಪಿದೆ ಎಂದು ಆರೋಪಿಸಿದರು.

ಜಲಸಿರಿ ಕುಡಿಯುವ ನೀರಿನ ಬಿಲ್‍ಗಳು ಒಂದೊಂದು ಮನೆಗೆ ರೂ.20 ರಿಂದ 60 ಸಾವಿರದವರೆಗೆ ಬರುತ್ತಿದೆ. ವಾರ್ಡಿನ ಜನತೆ ನಮ್ಮ ಮನೆಗೆ ಬಿಲ್ ತಂದು ಪ್ರಶ್ನಿಸುತ್ತಿದ್ದು, ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಜಲಸಿರಿ ಅಧಿಕಾರಿಗಳು ಸ್ವೇಚ್ಛಾಚಾರದಿಂದ ವರ್ತಿಸುತ್ತಿದ್ದಾರೆಂದು ಇನ್ನೋರ್ವ ಸದಸ್ಯ ಆರ್.ಸಿ.ಜಾವೀದ್ ಆರೋಪಿಸಿದರು.

ಬೀದಿ ವ್ಯಾಪಾರಿಗಳಿಂದ ಜಕಾತಿ ವಸೂಲಿ ಮಾಡುವ ಟೆಂಡರ್ ಪಡೆದವರು, ಬಡ ವ್ಯಾಪಾರಿಗಳಿಂದ ನಿಗದಿಗಿಂತ ಹೆಚ್ಚುವರಿ ಜಕಾತಿ ಮೊತ್ತ ಸಂಗ್ರಹಿಸುತ್ತಿದ್ದಾರೆ. ಇದರಿಂದ ವ್ಯಾಪಾರಿಗಳು ಬೇಸತ್ತಿದ್ದಾರೆ. ಇದನ್ನು ಸರಿಪಡಿಸಬೇಕಾದ ನಗರಸಭೆ ಅಧಿಕಾರಿಗಳು ಏಕೆ ಮೌನವಾಗಿದ್ದಾರೆ ಎಂದು ಹಿರಿಯ ಸದಸ್ಯ ಎಂ.ಎಸ್.ಬಾಬುಲಾಲ್ ಪ್ರಶ್ನಿಸಿದರು.

ಇಂಜಿನಿಯರ್‍ಗಳು ಸದಸ್ಯರ ಕೈಗೆ ಸಿಗುತ್ತಿಲ್ಲ. ನಮ್ಮ ವಾರ್ಡಿನ ಕುಂದು, ಕೊರತೆಗಳ ನ್ನು ಯಾರ ಬಳಿ ಹೇಳಿಕೊಳ್ಳಬೇಕು. ಹಾದಿ ತಪ್ಪು ತ್ತಿರುವ ನಗರಸಭೆ ಆಡಳಿತವನ್ನು ಸರಿ ದಾರಿಗೆ ತರಲು ಕೂಡಲೇ ತುರ್ತು ಕೌನ್ಸಿಲ್ ಸಭೆ ಕರೆ ಯಬೇಕೆಂದು ಸದಸ್ಯರಾದ ದಿನೇಶ್ ಬಾಬು, ಎಂ.ಆರ್.ಮುಜಾಮ್ಮಿಲ್ ಆಗ್ರಹಿಸಿದರು.

ನಗರಸಭೆ ಸಿಬ್ಬಂದಿಗಳಿಗೆ ಸರ್ವೆ ಹಾಗೂ ಕಂದಾಯ ಸಂಗ್ರಹ ಕಾರ್ಯಕ್ಕೆ ನಿಯೋಜನೆ ಮಾಡಿದೆ, ಸಭೆಗಳಿದ್ದಾಗ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಬೇಕಾಗುತ್ತದೆ, ಅನುಮಾನವಿ ದ್ದರೆ ಅಲ್ಲಿನ ರಿಜಿಸ್ಟರ್ ಪರಿಶೀಲಿಸಿರಿ. ಇನ್ನು ತುರ್ತು ಸಭೆಗೆ ನಗರಸಭಾಧ್ಯಕ್ಷರು ಸೂಚಿಸಿದರೆ ಸಭೆ ಕರೆಯಲಾಗುವುದೆಂದು ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಐಗೂರು ಬಸವರಾಜ್ ಪ್ರತಿಭಟನಾ ನಿರತ ಸದಸ್ಯರಿಗೆ ಮನವರಿಕೆ ಮಾಡಿದರು.

ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಾಪುರ ಹಾಗೂ ಉಪಾಧ್ಯಕ್ಷ ಕೆ.ಜಿ.ಸಿದ್ದೇಶ್ ಅವರು ಸದಸ್ಯರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಲಾಗುವುದೆಂದು ಭರವಸೆ ನೀಡಿದಾಗ ಪ್ರತಿಭಟನೆ ಕೈಬಿಡಲಾಯಿತು.

ಈ ವೇಳೆ ಸದಸ್ಯರಾದ ಎಸ್.ಎಂ.ವಸಂತ್ ಕುಮಾರ್, ಬಿ.ಅಲ್ತಾಫ್, ಸುಮಿತ್ರ ಕೆ. ಮರಿದೇವ್, ನಾಗರತ್ನಮ್ಮ, ಸಿ.ಎಂ.ಇಬ್ರಾಹಿಂ, ಅಬ್ದುಲ್ ಅಲೀಂ, ಆಟೋ ಹನುಮಂತಪ್ಪ, ಮುಖಂಡರಾದ ಮೋಹನ್ ದುರುಗೋಜಿ, ಮಾರುತಿ ಬೇಡರ್, ಜಾಕಿರ್ ಮದ್ದಿ ಮನ್ಸೂರ್ ಇದ್ದರು.

error: Content is protected !!