ಹರಿಹರ : ಶಾಲಾ ಅವಧಿಯಲ್ಲಿ ಭಾರೀ ವಾಹನ ಸಂಚಾರ ಸ್ಥಗಿತಕ್ಕೆ ಮನವಿ

ಹರಿಹರ : ಶಾಲಾ ಅವಧಿಯಲ್ಲಿ ಭಾರೀ ವಾಹನ ಸಂಚಾರ ಸ್ಥಗಿತಕ್ಕೆ ಮನವಿ

ಹರಿಹರ, ಸೆ. 12 – ಶಾಲಾ ಅವಧಿಯಲ್ಲಿ ನಗರದೊಳಗೆ ಭಾರೀ ವಾಹನ ಸಂಚಾರ ಸ್ಥಗಿತಗೊಳಿಸಬೇಕು ಹಾಗೂ ಹರಿಹರದಲ್ಲಿ ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸಬೇಕೆಂದು ಆಗ್ರಹಿಸಿ, ಕದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಹರಿಹರ ಶಾಖೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಇವರಿಗೆ ಮನವಿ ನೀಡಲಾಯಿತು.

ಹರಿಹರ ನಗರ ಠಾಣೆಗೆ ಸೋಮವಾರ ಭೇಟಿ ನೀಡಿದ್ದ ಎಸ್‍ಪಿ ಇವರಿಗೆ ಮನವಿ ನೀಡಿದ ನಂತರ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಹರಿಹರ ನಗರದಲ್ಲಿ ಹೊಸಪೇಟೆ-ಶಿವಮೊಗ್ಗ ಮತ್ತು ಬೀರೂರು-ಸಮ್ಮಸಗಿ ಹೀಗೆ ಎರಡು ಹೆದ್ದಾರಿಗಳು ಹಾದು ಹೋಗಿವೆ. ಈ ಎರಡೂ ರಸ್ತೆಗಳಲ್ಲಿ ನಗರದ ಬಹುತೇಕ ಶಾಲಾ-ಕಾಲೇಜುಗಳಿವೆ. ಈ ಶಾಲಾ, ಕಾಲೇಜುಗಳಿಗೆ ನಿತ್ಯ ಈ ಹೆದ್ದಾರಿಗಳ ಮೂಲಕ ಸಹಸ್ರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ.

ಭಾರೀ ವಾಹನಗಳ ಅಪಘಾತದಲ್ಲಿ ಹಲವು ಅಮಾಯಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಾಣ ತೆತ್ತಿದ್ದಾರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಶಾಲಾ ಅವಧಿಯಲ್ಲಿ ವಾಹನ ಸ್ಥಗಿತಗೊಳಿಸಬೇಕು ಎಂದು ಕೋರಿದರು.

ಈಗಿರುವ ನಗರ ಸಿವಿಲ್ ಪೊಲೀಸ್ ಠಾಣೆ ಸಿಬ್ಬಂದಿಗಳು ತಮ್ಮದೇ ಆದ ಕಾರ್ಯ ಒತ್ತಡದಲ್ಲಿರುವುದರಿಂದ ವಾಹನ ಸಂಚಾರ ನಿಯಂತ್ರಣ ಮಾಡುವುದು ಕಷ್ಟಕರವಾಗಿದೆ. ಹರಿಹರದ ಜನತೆಯ ದಶಕಗಳ ಬೇಡಿಕೆಯಾದ ಸಂಚಾರಿ ಪೊಲೀಸ್ ಠಾಣೆ ಸ್ಥಾಪನೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಂ.ಮಲ್ಲೇಶ್ ಗುತ್ತೂರು, ಪುಟ್ಟರಾಜು, ಕೇಶವ, ಆಸಿಫ್ ಅಲಿ ಪೈಲ್ವಾನ್, ಖಾಲಿದ್ ಇದ್ದರು.

error: Content is protected !!