ಲೋಕ ಅದಾಲತ್‌ನಲ್ಲಿ ಒಂದಾದ 13 ಜೋಡಿ

ಲೋಕ ಅದಾಲತ್‌ನಲ್ಲಿ ಒಂದಾದ 13 ಜೋಡಿ

ವಿಚ್ಛೇದನಕ್ಕಾಗಿ ಕೋರಿ ಅರ್ಜಿ ಸಲ್ಲಿಸಿದ್ದ ಜೋಡಿಗಳು

ದಾವಣಗೆರೆ, ಸೆ.9- ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಶನಿವಾರ ಜಿಲ್ಲೆಯ 13 ಜೋಡಿ ಗಳನ್ನು ಒಂದು ಮಾಡಲಾಗಿದೆ. ಇವರು ಪರಸ್ಪರ ಮನಸ್ತಾಪಗಳಿಂದ ದೂರ ಇರಲು ನಿರ್ಧರಿಸಿದ್ದವರು.

ಈ ಎಲ್ಲಾ ಜೋಡಿಗಳನ್ನು ಮನಪರಿವರ್ತ ನೆಗೊಳಿಸಿ ಮತ್ತೆ ಸಹಬಾಳ್ವೆಯ ಜೀವನಕ್ಕೆ ಹೆಜ್ಜೆ ಇರಿಸಿದ ಘಟನೆಗೆ ಇಲ್ಲಿಯ ಜಿಲ್ಲಾ  ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಯಿತು.

ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ 9  ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕು ನ್ಯಾಯಾಲಯ ಗಳಲ್ಲಿ  4 ದಂಪತಿಗಳು ಸೇರಿ ಒಟ್ಟು 13 ದಂಪತಿ ಗಳು ವಿವಿಧ ಕಾರಣಗಳಿಂದಾಗಿ ಇವರು  ವಿಚ್ಛೇದನ ಕೋರಿ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ್ದರು.

ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ  ನ್ಯಾಯವಾದಿಗಳು, ಸಂಧಾನಕಾರರು ದಂಪತಿಗಳಿಗೆ ಜೀವನದ ಬಗ್ಗೆ ತಿಳಿವಳಿಕೆ ಮೂಡಿಸಿ ಇಬ್ಬರನ್ನು ಮನಪರಿವರ್ತಿಸಿ, ಒಟ್ಟಿಗೆ ಬಾಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂದರ್ಭದಲ್ಲಿ  ಮಾತನಾಡಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ, ಜಿಲ್ಲೆಯಲ್ಲಿ ನಡೆದ ಲೋಕ ಅದಾಲತ್‌ನಲ್ಲಿ  ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ  13 ದಂಪತಿಗಳು ಒಂದಾಗಿ ಜೀವನ ನಡೆಸುವ ಸಂಕಲ್ಪ ಮಾಡಿದ್ದಾರೆ. ಲೋಕ ಅದಾಲತ್‌ನಿಂದ ಒಡೆದ  ಕುಟುಂಬಗಳನ್ನು  ಒಂದುಗೂಡಿಸುವ ಕೆಲಸ ಆಗುತ್ತಿದೆ ಎಂಬುದಕ್ಕೆ ಈ ಸನ್ನಿವೇಶ ಉತ್ತಮ ನಿದರ್ಶನ ಎಂದರು.

ವಕೀಲರ ಸಂಘದ ಜಿಲ್ಲಾ  ಅಧ್ಯಕ್ಷ ಎಲ್.ಹೆಚ್. ಅರುಣಕುಮಾರ್ ಮಾತನಾಡಿ, ಸಣ್ಣ ಪುಟ್ಟ ಕಾರಣಗಳಿಂದ ಮನಸ್ತಾಪಗೊಂಡು ಒಂದರಿಂದ ಐದು ವರ್ಷಗಳವರೆಗೂ ದೂರವಿದ್ದು  ವಿಚ್ಛೇದನ ಬಯಸಿದ್ದ  12 ದಂಪತಿಗಳು ರಾಜೀ ಸಂಧಾನದ ಮೂಲಕ ಒಂದಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ. ಇದರಲ್ಲಿ ನ್ಯಾಯಾಧೀಶರು, ನ್ಯಾಯವಾದಿಗಳು, ಸಂಧಾನಕಾರರ ಪಾತ್ರ ಮಹತ್ವದ್ದಾಗಿದ್ದು ಬೇರೆಯಾಗಿದ್ದ  ದಂಪತಿಗಳನ್ನು ಒಂದು ಗೂಡಿಸುವ ಕೆಲಸ ಆಗಿದೆ ಎಂದರು.

ರಾಜೀ ಸಂಧಾನದ ಮೂಲಕ ಮತ್ತೆ ಒಂದಾದ ಗೀತಾ ಮಾತನಾಡಿ, ಪತಿ ಪ್ರತಿದಿನವೂ ಬಯ್ಯುತ್ತಾನೆ ಎಂಬ ಕಾರಣಕ್ಕಾಗಿಯೇ ನಾನು ಅವರನ್ನು ಬಿಟ್ಟು ಬೇರೆಯಾಗಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೆ. ಆದರೆ, ವಿಚಾರ ಮಾಡಿ ನೋಡಿದಾಗ ಪತಿ ಹಾಗೆ ಮಾಡಲು ಅವರಲ್ಲಿರುವ ಮಾನಸಿಕ ಕಾಯಿಲೆ ಕಾರಣ ಎಂಬುದು ಅರಿವಿಗೆ ಬಂದಿತು. ಒಳ್ಳೆಯ ಚಿಕಿತ್ಸೆ ಕೊಡಿಸಿದರೆ ಅವರು ಸರಿಯಾಗುತ್ತಾರೆಂದು ವೈದ್ಯರು, ಪೊಲೀಸರು, ನ್ಯಾಯವಾದಿಗಳು, ಸಂಧಾನಕಾರರ ತಿಳಿಸಿದರು. ಪತಿಯನ್ನೂ  ಒಬ್ಬ ಮಗ ಎಂದು ಕೊಂಡು ನೋಡಿಕೊಳ್ಳುತ್ತೇನೆ ಎಂದರು.

ಇನ್ನೋರ್ವ  ಸಾರಿಗೆ ಸಂಸ್ಥೆಯ ಉದ್ಯೋಗಿ ಮಾತನಾಡಿ, ಸಣ್ಣ ಪುಟ್ಟ ಜಗಳ, ಮನಸ್ತಾಪದಿಂದ ಬೇರೆಯಾಗಿದ್ದೆವು. ಇಬ್ಬರು ಮಕ್ಕಳಿದ್ದು ತಂದೆ-ತಾಯಿ ಇರುವಾಗಲೇ ಮಕ್ಕಳು ಅನಾಥರಾಗಬಾರದು ಎಂಬ  ಕಾರಣದಿಂದ  ಇಬ್ಬರೂ ಹೊಂದಾಣಿಕೆಯಿಂದ ಜೀವನ ನಡೆಸಲು ನಿರ್ಧರಿಸಿ ಮತ್ತೆ ಒಂದಾಗಿದ್ದೇವೆ. ಉತ್ತಮ ಜೀವನ ನಡೆಸುತ್ತೇವೆ ಎಂದರು.

ಹೊಸ ಜೀವನ ನಡೆಸುವ ಸಂಕಲ್ಪ ವ್ಯಕ್ತಪಡಿಸಿದ ಇಮ್ರಾನ್ ಖಾನ್, ನಾವು ಇಬ್ಬರೂ ಮೂರು ವರ್ಷಗಳಿಂದ ಬೇರೆಯಾಗಿದ್ದೆವು. ಈಗ ಪರಸ್ಪರ ಅರಿತುಕೊಂಡು, ಹೊಂದಾಣಿಕೆಯಿಂದ ಜೀವನ ನಡೆಸಲು ಇಬ್ಬರೂ ತೀರ್ಮಾನಿಸಿದ್ದೇವೆ. ನಾನು ಯಾವತ್ತೂ ತಲಾಕ್‌ ಕೊಡಲ್ಲ. ಒಟ್ಟಿಗೆ ಬಾಳುವೆ ಮಾಡುತ್ತೇವೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರೆಣ್ಣವರ, ಜಿಲ್ಲಾ ವಕೀಲರ ಸಂಘದ  ಕಾರ್ಯದರ್ಶಿ ಎಸ್.ಬಸವರಾಜ್, ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ, ಸಹಕಾರ್ಯದರ್ಶಿ ಎ.ಎಸ್.ಮಂಜುನಾಥ್, ಸಂಧಾನಕಾರರಾದ ಭಾಗ್ಯಲಕ್ಷ್ಮಿ ಈ ವೇಳೆ ಉಪಸ್ಥಿತರಿದ್ದರು.

error: Content is protected !!