ಮಲೇಬೆನ್ನೂರು, ಸೆ.10- ತನ್ನಲ್ಲಿರುವ ವಿಶೇಷ ಪ್ರತಿಭೆ ಮೂಲಕ ಎಲ್ಲರ ಗಮನ ಸೆಳೆದಿರುವ ಜಿ.ಬೇವಿನಹಳ್ಳಿಯ `ಸಿ’ ಅಂಗನವಾಡಿ ಕೇಂದ್ರದ 5 ವರ್ಷದ ಅನ್ವಿತಾ ಇದುವರೆಗೆ 10ಕ್ಕೂ ಹೆಚ್ಚು ಪ್ರಶಸ್ತಿ ಪಡೆದಿದ್ದಾಳೆ. ಜಿ.ಬೇವಿನಹಳ್ಳಿಯ ಸುಮಾ ಮತ್ತು ನಟರಾಜ್ ಇವರ ಮಗಳಾದ ಅನ್ವಿತಾ, ಮೊದಲಿನಿಂದಲೂ ಕಲಿಕೆಯಲ್ಲಿ ಬಹಳ ಶ್ರದ್ಧೆ ಹೊಂದಿದ್ದು, ಭಾಷಣ ಮತ್ತು ಚಿತ್ರಕಲೆಯಲ್ಲಿ ಇವಳು ಎತ್ತಿದ ಕೈ.
`ಅ’ ಯಿಂದ `ಳ’ ವರೆಗೂ ಕನ್ನಡ ವರ್ಣ ಮಾಲೆ, `ಕ್ಕ’ ಯಿಂದ `ಳ್ಳ’ವರೆಗೂ ಒತ್ತಕ್ಷರಗಳು, `A’ ಯಿಂದ `Z’ ವರೆಗೆ ಉಲ್ಟಾ ಇಂಗ್ಲಿಷ್ ವರ್ಣಮಾಲೆ ಹೇಳುತ್ತಾರೆ. 1 ರಿಂದ 500 ಕ್ಕೂ ಅಧಿಕ ಸಂಖ್ಯೆ ಬರೆಯುತ್ತಾಳೆ ಮತ್ತು ಗುರುತಿಸುತ್ತಾಳೆ. 10ಕ್ಕಿಂತ ಹೆಚ್ಚು ಆಕಾರಗಳು, 20ಕ್ಕೂ ಹೆಚ್ಚು ಕಂಪ್ಯೂಟರ್ ಭಾಗಗಳನ್ನು ಗುರುತಿಸುವ ಇವಳು, 15ಕ್ಕೂ ಹೆಚ್ಚು ರಾಷ್ಟ್ರೀಯ ಚಿಹ್ನೆಗಳನ್ನು ಹೇಳುತ್ತಾಳೆ.
1 ರೂ. ಯಿಂದ 2000 ರೂ. ವರೆಗೂ ರೂಪಾಯಿ ಚಿಹ್ನೆಗಳನ್ನು ಗುರುತಿಸುವ ಅನ್ವಿತಾ, ಕಾಡು ಪ್ರಾಣಿಗಳು, ಸಾಕು ಪ್ರಾಣಿಗಳು ಮತ್ತು ಮನುಷ್ಯನ ದೇಹದ ಎಲ್ಲಾ ಭಾಗಗಳ ಹೆಸರನ್ನೂ ಹೇಳುತ್ತಾಳೆ. 15ಕ್ಕೂ ಅಧಿಕ ಬಣ್ಣಗಳ ಹೆಸರು ಹೇಳುವ ಇವಳು, ಒಂದರಿಂದ ನೂರರವರೆಗೆ ರೋಮನ್ ಸಂಖ್ಯೆಗಳನ್ನು ಹೇಳಿ, ಬರೆಯುತ್ತಾಳೆ.
`ಅ’ ಯಿಂದ `ಳ’ ವರೆಗೆ ಹಿಂದಿ ವರ್ಣಮಾಲೆ ಬರೆಯುತ್ತಾಳೆ. 15 ಜಿಲ್ಲೆಗಳ ಹೆಸರು ಹೇಳುವ ಈ ಪುಟ್ಟ ಬಾಲಕಿ, 50 ಕ್ಕೂ ಹೆಚ್ಚು ಜನರಲ್ ಪ್ರಶ್ನೆಗೆ ಉತ್ತರ ಹಾಗೂ ಇಂಗ್ಲಿಷ್ ಮತ್ತು ಕನ್ನಡ ರೈಮ್ಸ್, ಹನುಮಾನ್ ಚಾಲೀಸ, ಶ್ಲೋಕಗಳು, ವಿಷ್ಣು ಸಹಸ್ರ ನಾಮಗಳನ್ನೂ ನಿರರ್ಗಳವಾಗಿ ನೋಡದೇ ಹೇಳುವ ಅನ್ವಿತಾ, ಉದಯೋನ್ಮುಖಿ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ.
ಇವರ ಇನ್ನೊಂದು ವಿಶೇಷ ಪ್ರತಿಭೆ ಎಂದರೆ, ಎರಡು ಕೈಯಿಂದಲೂ ಬರೆಯುತ್ತಾಳೆ. ಇದುವ ರೆಗೂ 10ಕ್ಕೂ ಹೆಚ್ಚು ವಿವಿಧ ಸ್ಪರ್ಧೆಗಳಲ್ಲಿ ಭಾಗ ವಹಿಸಿ, ಬಹುಮಾನ ಹಾಗೂ ಪ್ರಶಸ್ತಿ ಪಡೆದಿದ್ದಾಳೆ. ಇವರ ಈ ಕಲಿಕಾ ಸಾಧನೆಯ ಹಿಂದೆ ತಾಯಿ ಸುಮಾ, ತಂದೆ ನಟರಾಜ್ ಮತ್ತು ಅಂಗನವಾಡಿ ಶಿಕ್ಷಕಿ ಅಂಬಿಕಾ ಅವರ ಪರಿಶ್ರಮ ಸಾಕಷ್ಟಿದೆ.