ಬಸವಣ್ಣನವರ ವಚನಗಳಿಂದ ಸರ್ವರಿಗೂ ಮಾರ್ಗದರ್ಶನ

ಬಸವಣ್ಣನವರ ವಚನಗಳಿಂದ ಸರ್ವರಿಗೂ ಮಾರ್ಗದರ್ಶನ

ತಾಲ್ಲೂಕು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಕ – ಸಾಹಿತಿ ಕೆರೆಬಿಳಚಿಯ ಅಕ್ರಮುಲ್ಲಾ ಶರೀಫ್

ದಾವಣಗೆರೆ, ಸೆ. 10- 12ನೇ ಶತಮಾನದಲ್ಲಿ ಜನ್ಮ ತಾಳಿದ ಬಸವಣ್ಣನವರು ಸಕಲ ಜನತೆಯ ಸಲುವಾಗಿ ಕೈಗೊಂಡ ಕಾರ್ಯಗಳು 800 ವರ್ಷ ಕಳೆದರೂ ಇಂದಿಗೂ ನಿತ್ಯ ನೂತನವಾಗಿವೆ. ಬಸವಣ್ಣ ನವರ ವಿಶಿಷ್ಟ ಕಾಣಿಕೆ ಏನೆಂದರೆ ಬಸವಣ್ಣ ನವರು 1500 ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರ ವಚನಗಳಿಂದ ಸರ್ವರಿಗೂ ಮಾರ್ಗದರ್ಶನವಿದೆ ಎಂದು ಕರೆಕಟ್ಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಸಾಹಿತಿ ಕೆರೆಬಿಳಚಿಯ ಅಕ್ರಮುಲ್ಲಾ ಶರೀಫ್ ತಿಳಿಸಿದರು.

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಿಟುವಳ್ಳಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಶಾಲೆಯಲ್ಲಿ ನಿನ್ನೆ ನಡೆದ ಶಾಲಾ – ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವಣ್ಣನವರ ಜೀವನ ಹಾಗೂ ವಚನಗಳು ವಿಷಯ ಕುರಿತು ಅವರು ಮಾತನಾಡಿದರು.

`ಇವನಾರವ ಇವನಾರವ ಎಂದೆನಿಸಯ್ಯ… ಇವ ನಮ್ಮವ ಇವ  ನಮ್ಮವ  ಎಂದೆನಿಸಯ್ಯ, ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ’ ಹಾಗೂ `ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಈ ತರಹದ ಅನೇಕ ವಚನಗಳ ಕುರಿತು ಮಕ್ಕಳಿಗೆ ಎಳೆ ಎಳೆಯಾಗಿ ಅರ್ಥೈಸಿದರು.

ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ ಬೇತೂರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಹಾಗೂ ದತ್ತಿ ದಾನಿಗಳನ್ನು ಸ್ಮರಿಸಿದರು.

ಮುಖ್ಯ ಅತಿಥಿಯಾಗಿ ಎ.ಕೆ. ಫೌಂಡೇಷನ್ ನ ಸಂಸ್ಥಾಪಕ ಕೆ.ಬಿ. ಕೊಟ್ರೇಶ್ ಮಾತನಾಡಿ, ತಾಲ್ಲೂಕು ಕ.ಸಾ.ಪ ಶಾಲಾ – ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಹಾಗೂ ದತ್ತಿ ಉಪನ್ಯಾಸದಂತ ಕಾರ್ಯಕ್ರಮಗಳೊಂದಿಗೆ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ತಿಳಿಸುತ್ತಾ, ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳನ್ನು ಸ್ಮರಿಸುತ್ತಾ, ಅವರಂತೆ ಉತ್ತಮ ವಿದ್ಯಾಭ್ಯಾಸ ಮಾಡಿ ವಿದ್ಯಾರ್ಥಿಗಳು ಉತ್ತಮ ಸಾಹಿತಿಗಳಾಗಿ, ನಾಡು ನುಡಿಗೆ ಒಳ್ಳೆಯ ಹೆಸರು ತನ್ನಿ ಎಂದರು.

ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಂ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕ ಎ.ಕೆ. ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು.

ಭಾರತ ಸೇವಾದಳದ ಟಿ.ನಾಗರಾಜ್, ಕೆ.ಟಿ.ಜಯಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಾವಣಗೆರೆ ಜಿಲ್ಲಾ ಉತ್ತಮ ಶಿಕ್ಷಕಿಯಾಗಿ ಆಯ್ಕೆಯಾದ ಶ್ರೀರಾಮ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಎ.ಎಲ್. ನಾಗವೇಣಿ ಅವರನ್ನು ದಾವಣಗೆರೆ ತಾಲ್ಲೂಕು ಕಸಾಪ ಹಾಗೂ ಎ.ಕೆ. ಫೌಂಡೇಷನ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಹಿರಿಯ ಶಿಕ್ಷಕ ಸಿ. ಅಜಯ್ ನಾರಾ ಯಣ್ ಪ್ರಾರ್ಥಿಸಿದರು. ಶಿಕ್ಷಕಿ ಎ.ಎಲ್. ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕು ಕಸಾಪ ನಿರ್ದೇಶಕರಾದ ಶ್ರೀಮತಿ ಸೌಭಾಗ್ಯ ನಾಗರಾಜ್ ವಂದಿಸಿದರು.

error: Content is protected !!