ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಬೇಕು

ವಿದ್ಯಾಭ್ಯಾಸಕ್ಕೆ ಒತ್ತು ಕೊಟ್ಟು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಬೇಕು

ಜಿಲ್ಲಾ ಮಾದಿಗ ದಂಡೋರ  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಹಿತ ನುಡಿ

ದಾವಣಗೆರೆ, ಸೆ.10- ಸಮಾಜದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡುವುದರ ಮೂಲಕ ಸಮಾಜ ದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಬೇಕೆಂದರು. ಇಂದಿನ ದಿನಮಾನಗಳಲ್ಲಿ ವಿದ್ಯಾವಂತರಾಗದಿದ್ದರೆ, ಮುಂದಿನ ದಿನಗಳಲ್ಲಿ ನಿಮ್ಮ ಬದುಕು ತುಂಬಾ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಹೇಳಿದರು. 

ಜಿಲ್ಲಾ ಮಾದಿಗ ದಂಡೋರ ವತಿಯಿಂದ ರೋಟರಿ ಬಾಲ ಭವನದಲ್ಲಿ ಮಾದಿಗ ಸಮಾಜದ 2022-23 ನೇ ಸಾಲಿನಲ್ಲಿ ಎಸ್ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 75ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. 

ವಿದ್ಯಾವಂತರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ, ಸಮಾಜದಲ್ಲಿ ನಿಮಗೆ‌ ಎಲ್ಲಾ ರೀತಿಯ ಗೌರವ ಪ್ರಾಪ್ತಿಯಾಗುತ್ತದೆ. ಅಸ್ಪೃಶ್ಯತೆ ಮತ್ತು ಕಂದಾಚಾರ ತಾವಾಗಿಯೇ ನಿರ್ಮೂಲನೆಯಾಗುತ್ತವೆ. ವಿದ್ಯಾರ್ಥಿಗಳ ತಂದೆ-ತಾಯಿಗಳು ತಮ್ಮ ದುಡಿಮೆಯ ಹಣವನ್ನು ದುಂದುವೆಚ್ಚ ಮಾಡದೆ, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡುವುದರೊಂದಿಗೆ ಅವರನ್ನು ಆದರ್ಶ ವ್ಯಕ್ತಿಗಳನ್ನಾಗಿ ಮಾಡಬೇಕೆಂದು ತಿಳಿಸಿದರು. ಸಮಾಜ ಅನುಭವಿಸುತ್ತಿರುವ ಅಸ್ಪೃಶ್ಯತೆಯನ್ನು ತೊಡೆದು ಹಾಕಬೇಕೆಂ ದರೆ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವಂತೆ ಕರೆ ನೀಡಿದರು.

ಸಮಾರಂಭದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ಬಸವರಾಜಪ್ಪ ನೆರವೇರಿಸಿದರು. ಇನ್‌ಸೈಟ್ಸ್ ಐಎಎಸ್ ನಿರ್ದೇಶಕ ಜಿ.ಬಿ.ವಿನಯ್ ಕುಮಾರ್ ಮಾತನಾಡಿ, ತುಳಿತಕ್ಕೆ ಒಳಗಾದ ಸಮಾಜದ ಮಕ್ಕಳಿಗೆ ತಮ್ಮ ಸಂಸ್ಥೆಯ ವತಿಯಿಂದ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಮುಂದಿನ ದಿನಗಳಲ್ಲಿ ಚಿಂತನೆ ನಡೆಸುತ್ತೇವೆ ಎಂದರು. ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಕರೆ ನೀಡಿದರು. 

ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಜಸ್ಟಿನ್ ಜಯಕುಮಾರ್, ಇಂದಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಒತ್ತು ಕೊಡುವುದನ್ನು ಬಿಟ್ಟು ಮೊಬೈಲ್‌ಗಳಿಗೆ  ಹೆಚ್ಚಿನ ಸಮಯ ಕೊಡುತ್ತಿರುವುದು  ಆತಂಕದ ವಿಷಯವಾಗಿದೆ. ಆದ್ದರಿಂದ ಮಕ್ಕಳ ಮೇಲೆ ಪೋಷಕರು ಗಮನ ಹರಿಸುವಂತೆ ತಿಳಿಸಿದರು. 

ಪ್ರಶಸ್ತಿ ಪತ್ರವನ್ನು ಶಾಸಕ ಕೆ.ಎಸ್. ಬಸವಂತಪ್ಪ ವಿತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಹೆಚ್.ಸಿ. ಗುಡ್ಡಪ್ಪ ವಹಿಸಿದ್ದರು. ಸಭೆಯಲ್ಲಿ ಜಗಳೂರು ತಾಲ್ಲೂಕು ಅಧ್ಯಕ್ಷ ಜಿ.ಹೆಚ್.ಮಹೇಶ್, ಈಚಘಟ್ಟ ಕೆಂಚಪ್ಪ, ಕಣವಿಹಳ್ಳಿ ಮಂಜುನಾಥ್, ಜಿ.ಹೆಚ್. ತಮ್ಮಣ್ಣ, ಬಿ.ಎಸ್. ಕೃಷ್ಣಮೂರ್ತಿ, ಹೆಚ್. ಚಿದಾನಂದಪ್ಪ, ಗಂಗನಕಟ್ಟಿ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!