ಕಾಲಜ್ಞಾನಿ ಮಠದ ಡಾ. ಸಿದ್ದಲಿಂಗ ಸ್ವಾಮೀಜಿ ಅಭಿಮತ
ವಿನಾಯಕ ನಗರ ಕ್ಯಾಂಪ್‌ನಲ್ಲಿ ಗಮನ ಸೆಳೆದ ಮೋದಕ ಯಾಗ
ಮಲೇಬೆನ್ನೂರು, ಸೆ.6- ‘ಚಂದ್ರಯಾನ-3’ ಮತ್ತು ‘ಆದಿತ್ಯ-1’ ಯಶಸ್ವೀ ಉಡ್ಡಯನದ ಮೂಲಕ ಇಸ್ರೋದ ನಮ್ಮ ವಿಜ್ಞಾನಿಗಳು ಭಾರತದ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ವಿನಾಯಕ ನಗರ ಕ್ಯಾಂಪಿನ ಕಾಲಜ್ಞಾನಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
ಅವರು ಭಾನುವಾರ ಸಂಜೆ ತಮ್ಮ ಮಠದಲ್ಲಿ ತಮ್ಮ ಜನ್ಮ ವರ್ಧಂತಿ ಅಂಗವಾಗಿ ಭಕ್ತರು ಏರ್ಪಡಿಸಿದ್ದ ಗುರುವಂದನಾ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ, ಆಶೀರ್ವಚನ ನೀಡಿದರು.
ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ ಸಾಧಿಸಿ ಇದೀಗ ಸೂರ್ಯನ ಒಡಲಿನ ರಹಸ್ಯವನ್ನು ಬಯಲು ಮಾಡಲು ನಮ್ಮ ದೇಶದ
ವಿಜ್ಞಾನಿಗಳು ಮೊದಲ ಬಾರಿಗೆ ಸೂರ್ಯಯಾನ ಯೋಜನೆ ಕೈಗೆತ್ತಿಕೊಳ್ಳುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ ಎಂದು ವಿಜ್ಞಾನಿಗಳನ್ನು ಅಭಿನಂದಿಸಿದರು.
ಭಾರತಕ್ಕೆ ಗುರು ಪರಂಪರೆಯ ಶಕ್ತಿ ಇದ್ದು, ಅಂತಹ ಪರಂಪರೆಯನ್ನು ಸೃಷ್ಟಿ ಮಾಡಿದ ಭಗವಂತನಿಗೆ ನಾವೆಲ್ಲರೂ ಚಿರಋಣಿಯಾಗಿರಬೇಕು. ಏಕೆಂದರೆ, ಜಗತ್ತಿಗೆ ಶಿಕ್ಷಣ ನೀಡಿದ ನಮ್ಮ ಭಾರತಕ್ಕೆ ಗುರುತ್ವದ ಗುಣವಿದೆ. ಈ ಕಾರಣಕ್ಕಾಗಿಯೇ ಭಾರತ ಸ್ವಾಮಿ ವಿವೇಕಾನಂದರ ಕಾಲದಿಂದಲೂ ಜಗತ್ತಿನ ಗಮನ ಸೆಳೆಯುತ್ತಾ ಬಂದಿದೆ.
ಇಂತಹ ಪುಣ್ಯಭೂಮಿಯಲ್ಲಿ ಹುಟ್ಟುವ ಪ್ರತಿಯೊಬ್ಬರೂ ಯೋಗಿಗಳೇ ಎಂದ ಡಾ. ಸಿದ್ದಲಿಂಗ ಸ್ವಾಮೀಜಿ, ಜಗತ್ತು ಮನೆಯಾದರೆ ಭಾರತ ಪೂಜಾ ಮಂದಿರವಿದ್ದಂತೆ. ಇಲ್ಲಿಗೆ ಬರುವವರು ಪಾದರಕ್ಷೆ ಬಿಟ್ಟು, ಭಕ್ತಿ-ಭಾವದಿಂದ ಬರಬೇಕೆಂದರು.
ದೇಶವನ್ನು ಪ್ರೀತಿಸಿದರೆ ದೇವರನ್ನೇ ಪೂಜಿಸಿ ದಂತೆ. ಹಿಂದಿನ ಕಾಲದ ಮೌಲ್ಯ ಶಿಕ್ಷಣವನ್ನು ಇಂದಿನ ಯುವ ಜನತೆಗೆ ನೀಡಬೇಕು. ಆಗ ಮಾತ್ರ ವಿವೇಕಾನಂದರಂತಹ ವ್ಯಕ್ತಿಗಳು ಬೆಳೆಯಲು ಸಾಧ್ಯವಾಗುತ್ತದೆ. ಸದೃಢ ಭಾರತ ನಿರ್ಮಾಣಕ್ಕಾಗಿ ನಮ್ಮ ಸಂಸ್ಕೃತಿ-ಸಾಹಿತ್ಯ-ಸಂಸ್ಕಾರವನ್ನು ನಮ್ಮ ಮಕ್ಕಳಿಗೆ ಕಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಈ ವೇಳೆ ಪುರೋಹಿತರಾದ ಮೃತ್ಯುಂಜಯ ಸ್ವಾಮಿ, ಪರಮೇಶ್ವರ ಶಾಸ್ತ್ರಿ, ಜ್ಞಾನೇಂದ್ರ, ರುದ್ರೇಶ್ ಅವರ ತಂಡ ಸಹಸ್ರ ಮೋದಕ ಗಣಪತಿ ಯಾಗ ಮಾಡಿ ಎಲ್ಲರ ಗಮನ ಸೆಳೆದರು.
ನಂತರ ಯಾಗದ ಮಹತ್ವವನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಮಾಜಿ ಸಂಸದ ಮಂಜುನಾಥ್ ಕುನ್ನೂರು ಮಾತನಾಡಿ, ಶ್ರೀಗಳ ಜ್ಞಾನಶಕ್ತಿಯಿಂದಾಗಿ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರುವಂತಾಗಿದೆ. ಅವರಿಗೆ ಭಗವಂತ ಆಯುರಾ ರೋಗ್ಯ ಭಾಗ್ಯ ನೀಡಲೆಂದು ಪ್ರಾರ್ಥಿಸಿದರು.
ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಗ್ರಾ.ಪಂ. ಮಾಜಿ ಸದಸ್ಯ ಪ್ರಸಾದ್‌ರಾವ್ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.