ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಅಳಡಿಸಿಕೊಳ್ಳಲು ಹಿತ ನುಡಿ

ವಿದ್ಯಾರ್ಥಿಗಳು ಮಾನವೀಯ  ಮೌಲ್ಯ ಅಳಡಿಸಿಕೊಳ್ಳಲು ಹಿತ ನುಡಿ

ಹರಪನಹಳ್ಳಿಯ ಉಜ್ಜಯಿನಿ ಜಗದ್ಗುರು ಮರುಳಾರಾಧ್ಯ ಪದವಿ ಪೂರ್ವ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ಎಂ.ಎಂ.ಜೆ. ಹರ್ಷವರ್ಧನ

ಹರಪನಹಳ್ಳಿ, ಸೆ. 5- ವಿದ್ಯಾರ್ಥಿಗಳು ಜೀವನ ದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಿ ಎಂದು ಉಜ್ಜಯಿನಿ ಜ್ಞಾನ ಗುರುಪೀಠದ ಕಾರ್ಯ ದರ್ಶಿ ಎಂ.ಎಂ.ಜೆ. ಹರ್ಷವರ್ಧನ ಹೇಳಿದರು.

ಪಟ್ಟಣದ ಶ್ರೀ ಉಜ್ಜಯಿನಿ ಜಗದ್ಗುರು ಮರುಳಾರಾಧ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ  ಸಾಹಿತ್ಯಿಕ, ಸಾಂಸ್ಕೃತಿಕ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೈತಿಕ ಮೌಲ್ಯವು ವಿದ್ಯಾರ್ಥಿಗಳ ಜೀವನದ ರೂಪು ರೇಷೆಯನ್ನೇ ಬದಲಾಯಿಸುತ್ತವೆ. ಹೀಗಾಗಿಯೇ ಮೌಲ್ಯ ರಹಿತ ಶಿಕ್ಷಣಕ್ಕೆ ಯಾವುದೇ ಅರ್ಥವಿರುವುದಿಲ್ಲ. ಮೌಲ್ಯವರ್ಧನೆ ಎಂದರೆ ಮಕ್ಕಳಲ್ಲಿ ನೈತಿಕ ಸದ್ಗುಣಗಳಾದ ಶ್ರದ್ಧೆ, ನಿಷ್ಟೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣುತಾಭಾವ ಸೇರಿದಂತೆ ಇತರೆ ಗುಣಗಳನ್ನು ಬೆಳೆಸುವುದಾಗಿದೆ ಎಂದರು.

ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಗುರಿ ತಲುಪುವ ಕೆಲಸ ಮಾಡಬೇಕು. ಶಿಕ್ಷಣದ ಜೊತೆಯಲ್ಲಿ ಉತ್ತಮ ಸಂಸ್ಕಾರ ಕಲಿಯಬೇಕು. ರೈತ ದೇಶದ ಬೆನ್ನೆಲುಬು. ಆ ರೈತನ ಮಕ್ಕಳಿಗೆ ಹೆಣ್ಣು ಸಿಗುವ ಕಾಲ ದೂರವಿದ್ದು, ರೈತನ ಹಾಗೂ ರೈತರ ಮಕ್ಕಳಿಗೆ ಹೆಣ್ಣು ಕೊಡಬೇಕು ಎಂದು ಅವರು ಹೇಳಿದರು. 

ಉಜ್ಜಯಿನಿ ಜ್ಞಾನ ಗುರುಪೀಠದ ನಿರ್ದೇಶಕ ಉಚ್ಚಂಗಿದುರ್ಗದ ಬಿ. ಶಿವಕುಮಾರಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಿಗುವಂತಹ ಅವಕಾಶಗಳನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡರೆ, ತನ್ನ ಗುರಿ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಹರಿಹರದ ಎಸ್‌ಜೆವಿಪಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಂ.ಜೆ.ಎಫ್. ಪ್ರೊ. ಬಿ.ಬಿ. ನಂದ್ಯಾಲ್ ವಿಶೇಷ ಉಪನ್ಯಾಸ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಹೆಚ್. ಮಲ್ಲಿಕಾರ್ಜುನ, ನಿವೃತ್ತ ಕನ್ನಡ ಉಪನ್ಯಾಸಕ ಎಂಪಿಎಂ ಶಾಂತವೀರಯ್ಯ, ಉಪನ್ಯಾಸಕರಾದ ಸೋಮರೆಡ್ಡಿ, ಚನ್ನಬಸಪ್ಪ, ಎಸ್. ಕೊಟ್ರೇಶ್, ಚಿಕ್ಕಪ್ರಸಾದ್, ಕೆ. ಅಶೋಕ, ಬೀರನಾಯ್ಕ, ಚನ್ನಬಸಪ್ಪ, ಶೈಲಜಾ, ಹೇಮಾ, ಕಾಲೇಜಿನ ವ್ಯವಸ್ಥಾಪಕರು ಎಂ.ಜಿ. ರುದ್ರಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!