ನಿರಂತರ ಕಲಿಕೆ, ಕಾದಂಬರಿ, ಬರವಣಿಗೆ ಹವ್ಯಾಸ ರೂಢಿಸಿಕೊಳ್ಳಿ

ನಿರಂತರ ಕಲಿಕೆ, ಕಾದಂಬರಿ, ಬರವಣಿಗೆ ಹವ್ಯಾಸ ರೂಢಿಸಿಕೊಳ್ಳಿ

ಜಗಳೂರಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ

ಜಗಳೂರು, ಸೆ. 5  – ರಾಜಕಾರಣಿಗಳು‌‌‌ ಹಾಗೂ ಸರ್ಕಾರಿ ನೌಕರರು ಆಂಗ್ಲ ಭಾಷೆ ವ್ಯಾಮೋಹ ತೊರೆದು, ಸರ್ಕಾರಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದಾಗ ಮಾತ್ರ ಸರ್ಕಾರಿ ಶಾಲೆಗಳ ಉಳಿವು ಸಾಧ್ಯ ಎಂದು  ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕುಂ.ವೀರಭದ್ರಪ್ಪ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಡಾ.ರಾಧಾಕೃಷ್ಣನ್ ಅವರ  135 ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕರಿಗೆ ಡಾ.ಬಿ.ಆರ್. ಅಂಬೇಡ್ಕರ್, ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಅಬ್ದುಲ್ ಕಲಾಂ ಅವರಂತಹ ಮಹನೀಯರು ಆದರ್ಶವಾಗ ಬೇಕಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ‌ ಶಿಕ್ಷಣದ ಜೊತೆಗೆ ನೈತಿಕತೆ ಬೆಳೆಸಬೇಕು. ತಾವುಗಳು ನಿರಂತರ ಕಲಿಕೆ, ಕಥೆ, ಕಾದಂಬರಿ, ಬರವಣಿಗೆ ಹವ್ಯಾಸ ರೂಢಿಸಿಕೊಳ್ಳಬೇಕು  ಹೇಳಿದರು.

ಸರ್ಕಾರಿ ಶಾಲಾ ‌ಕಟ್ಟಡಗಳನ್ನು ಗುತ್ತಿಗೆದಾರರು ಕಳಪೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಶಿಕ್ಷಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ‌ ಸಂಖ್ಯೆ ಕ್ರಮೇಣ ಕ್ಷೀಣವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕೂಡಲೇ ಸರ್ಕಾರ ಜಾಗೃತವಾಗಬೇಕು ಎಂದರು.

ನಾನು ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡು ರಸ್ತೆ, ಶೌಚಾಲಯ, ಮೂಲ ಸೌಕರ್ಯಗಳಿಲ್ಲದ ಕುಗ್ರಾಮದಲ್ಲಿ  ಶೋಷಿತ ಸಮುದಾಯದ ಮಕ್ಕಳಿಗೆ ಬೋಧನೆ ಮಾಡಿದ ಪರಿಣಾಮ ಹಲವು ಜನ ಶಿಷ್ಯಂದಿರು ವಿವಿಧ ಸರ್ಕಾರಿ ನೌಕರಿಗಳನ್ನು ಅಲಂಕರಿಸಿದ್ದಾರೆ. ಅಲ್ಲದೇ ಹಲವು ಕಾದಂಬರಿ ರಚಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ನಿಮ್ಮ ಪ್ರತಿನಿಧಿಯಾಗಿ ನಾನೊಬ್ಬ ಹಳ್ಳಿಯ ಶಿಕ್ಷಕ ಎಂಬುದು ಹೆಮ್ಮೆ ತಂದಿದೆ. ದೇಶದಲ್ಲಿ ಶಿಕ್ಷಕರೇ ನಿಜವಾದ ಬುದ್ದಿವಂತರು. ಸಮಾಜದಲ್ಲಿ ಶಿಕ್ಷಕರಿಗೆ ಗೌರವ ಸ್ಥಾನಮಾನಗಳಿವೆ ಎಂದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ನಾನು ಪ್ರಾಥಮಿಕ ಶಾಲೆ ಗುರುವಿನಿಂದ‌ ಕಲಿತ‌ ಪರಿಣಾಮ ನನ್ನ ಮಕ್ಕಳನ್ನು ಉನ್ನತ ವ್ಯಾಸಂಗ ಮಾಡಿಸಿ, ಇಂದು ಶಾಸಕನಾಗಿ ಆಯ್ಕೆಯಾಗಿ ರುವೆ. ಶಿಕ್ಷಕರು ಮಕ್ಕಳಿಗೆ ಬಿತ್ತುವ ಎರಡು ಅಕ್ಷರದ ಬೀಜ ಭವಿಷ್ಯದಲ್ಲಿ ಫಲ ಕೊಡುತ್ತದೆ. ಅದರಿಂದಾಗುವ ತೃಪ್ತಿ ಬೇರೊಂದಿಲ್ಲ ಎಂದರು.

ಸಮಾಜದಲ್ಲಿ  ಮಕ್ಕಳನ್ನು ಸುಂದರ ಮೂರ್ತಿಗಳನ್ನಾಗಿಸುವ ಶಿಕ್ಷಕರೇ ನಿಜವಾದ ಶಿಲ್ಪಿಗಳು.

ವಿದ್ಯಾರ್ಥಿಗಳ‌ಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದು ಶಿಕ್ಷಕರು.ಕ್ಷೇತ್ರದಲ್ಲಿ ಶಿಕ್ಷಕರು ತಮ್ಮ ಕರ್ತವ್ಯ ಮರೆತರೆ ಸಮಾಜಕ್ಕೆ ದ್ರೋಹ ಎಸಗಿದಂತೆ. ತಮ್ಮ ಪ್ರಾಮಾಣಿಕ ಸೇವೆಗೆ ನನ್ನ ಸಹಕಾರವಿದೆ. ನಾನೊಬ್ಬ ಶಾಸಕನಲ್ಲ ಜನ ಸೇವಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಇಓ ಹಾಲಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್. ಟಿ. ಘಟಕದ ರಾಜ್ಯಾಧ್ಯಕ್ಷ  ಕೆ.ಪಿ.ಪಾಲಯ್ಯ, ತಹಶೀಲ್ದಾರ್ ಡಾ. ಅರುಣಕುಮಾರ್ ಕಾರಗಿ, ತಾ.ಪಂ. ಇಓ ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಚಂದ್ರಪ್ಪ, ಸರ್ಕಾರಿ ಪ್ರಾಥಮಿಕ‌ ಶಾಲಾ ತಾಲ್ಲೂಕು ಅಧ್ಯಕ್ಷ ಹನುಮಂತೇಶ್, ಕಾರ್ಯದರ್ಶಿ ಅಂಜಿನಾಯ್ಕ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪ.ಪಂ. ಸದಸ್ಯರಾದ ನಿರ್ಮಲಕುಮಾರಿ, ಲಲಿತಮ್ಮ, ಮಂಜಮ್ಮ, ರಮೇಶ್ ರೆಡ್ಡಿ, ಲುಕ್ಮಾನ್ ಖಾನ್, ಮುಖಂಡ ರಾದ ಪಲ್ಲಾಗಟ್ಟೆ ಶೇಖರಪ್ಪ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ಪ.ಪಂ‌. ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಬಿ.ಆರ್.ಸಿ. ಹಾಲಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!