ಹೊನ್ನಾಳಿ, ಸೆ.1- ತಾಲ್ಲೂಕಿನ ರೈತರು ಎದುರಿಸುತ್ತಿರುವ ವಿದ್ಯುತ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಬೆಸ್ಕಾಂ ಎಂ.ಡಿ. ಮಹಾಂತೇಶ್ ಬೀಳಗಿ ಅವರೊಂದಿಗೆ ಚರ್ಚಿಸಿ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲ್ಲೂಕಿನ ಬಲಮರಿ ಗ್ರಾಮದಲ್ಲಿ ಹಮ್ಮಿ ಕೊಳ್ಳಲಾಗಿದ್ದ ವಿಜಯೋತ್ಸವ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮಸ್ಥರ ಮನವಿಯ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಶಿವಮೊಗ್ಗದಿಂದ ಆರಂಭವಾಗುವ ತುಂಗಾ ನಾಲೆ ದಡಗಳಲ್ಲಿ ಅಕ್ರಮವಾಗಿ ಐದು ಸಾವಿರ ಪಟ್ಟು ಹೊಂದಿಲ್ಲದಿರುವ ಮನೆಗಳಿವೆ. 500 ರಿಂದ 700 ಅಕ್ರಮ ಪಂಪ್‍ಸೆಟ್‍ಗಳು ನಾಲೆ ಸಂಪರ್ಕದಲ್ಲಿವೆ. ಬಲಮುರಿ ಸೇರಿದಂತೆ, ಇತರೆ ಅಚ್ಚುಕಟ್ಟು ಪ್ರದೇಶಗಳ ಕೊನೆ ಹಳ್ಳಿಗಳಿಗೆ ನೀರು ದೊರೆಯುವುದು ಕಷ್ಟ ಸಾಧ್ಯ. ಮಳೆಯಿಂದಲೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ನಾಲೆ ಹೂಳು ತೆಗೆಸಲಾಗದ ಕಾರಣ ಬೆಳೆಗೆ ನೀರು ದೊರಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.
ಬಲಮುರಿ ಗ್ರಾಮಕ್ಕೆ ಸಮರ್ಪಕವಾಗಿ ತುಂಗಾ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಸಮರ್ಪಕ ಕರೆಂಟ್ ದೊರೆಯದ ಸ್ಥಿತಿಯಲ್ಲಿದ್ದು, ಮಳೆ ಬಾರದೇ ಬರದ ಛಾಯೇ ಆವರಿಸಿದೆ. ಇಂತಹ ಸಂದರ್ಭದಲ್ಲಿ `ಐರಾವತ ರಥ’ದಲ್ಲಿ ಮೆರವಣಿಗೆ ಮೂಲಕ ಗ್ರಾಮದ ರಸ್ತೆಗಳಲ್ಲಿ ಸುತ್ತಾಡಿದರೆ ಗ್ರಾಮಸ್ಥರು ತಪ್ಪಾಗಿ ತಿಳಿಯುವಂತಾಗಬಾರದು ಎಂದು ಮೆರವಣಿಗೆಗೆ ಶಾಸಕರು ಒಪ್ಪದಾದಾಗ, ಸಂಘಟ ಕರು ಸರಳವಾಗಿ ಸಭೆಯನ್ನು ಮಾಡುವುದಾಗಿ ಶಾಸಕರನ್ನು ಕರೆತಂದು ಸಭೆ ನಡೆಸಿದ ಪ್ರಸಂಗವೂ ನಡೆಯಿತು.
ಬಲಮುರಿ ಕಾಂಗ್ರೆಸ್ ಮುಖಂಡ ಸಂಗಮೇಶ್ ಮಾತನಾಡಿ, ಐರಾವತದ ಮೆರವಣಿಗೆ ಹತ್ತದ ಶಾಂತನಗೌಡರ ಕ್ರಮ ಸ್ವಲ್ಪ ಬೇಸರ ತರಿಸಿದೆ, ಆದರೂ, ಇದಕ್ಕೆ ಮಳೆರಾಯ, ಬರದ ಛಾಯೆ ಕಾರಣವಾಗಿದೆ. ಒಂದೆರಡು ದಿನಗಳಲ್ಲಿ ಮಳೆ ಬಂದರೆ ಮತ್ತೆ ಅದ್ದೂರಿ ಸಭೆ ನಡೆಸಲಿದ್ದೇವೆ ಎಂದರು.
ಸಭೆಯಲ್ಲಿ ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ, ಕಾಂಗ್ರೆಸ್ ಮುಖಂಡ ಸಣ್ಣಕ್ಕಿ ಬಸವನಗೌಡ, ಹೆಚ್.ಎ.ಉಮಾಪತಿ, ಹುಣಸಘಟ್ಟ ಗದ್ದಿಗೇಶ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಸದಸ್ಯೆ ಹಾಲಮ್ಮ ವಹಿಸಿದ್ದರು. ಸದಸ್ಯೆ ಆಶಾ, ಬಲಮುರಿ ಸಿದ್ದಪ್ಪ, ಪ್ರಕಾಶ್, ಶೇಖರಪ್ಪ, ಹನುಮಂತಾಚಾರ್ಯ, ಆನಂದಪ್ಪ, ಸಂಗಮೇಶ್, ಕಡದಕಟ್ಟೆ ಜಗದೀಶ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಂಜಿತ್ ಜಿ.ಸುಷ್ಮಾ ಮತ್ತಿತರರು ಉಪಸ್ಥಿತರಿದ್ದರು.