ಕ್ರೀಡೆ ದೈಹಿಕ, ಮಾನಸಿಕ ಸದೃಢತೆಗೆ ಪೂರಕ : ಶಾಸಕ ಬಿ. ದೇವೇಂದ್ರಪ್ಪ

ಕ್ರೀಡೆ ದೈಹಿಕ, ಮಾನಸಿಕ ಸದೃಢತೆಗೆ ಪೂರಕ : ಶಾಸಕ ಬಿ. ದೇವೇಂದ್ರಪ್ಪ

ಜಗಳೂರು, ಸೆ.1- ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಪೂರಕವಾಗಲಿವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು.

ಪಟ್ಟಣದ ಬೇಡರ ಕಣ್ಣಪ್ಪ ಪ್ರೌಢಶಾಲಾ ಆವರಣದಲ್ಲಿ ಆರ್ ವಿ ಎಸ್ ಶಾಲೆ ವತಿಯಿಂದ ಆಯೋಜಿಸಿದ್ದ ದಕ್ಷಿಣ ವಲಯ ಮಟ್ಟದ ಪ್ರೌಢಶಾಲಾ ಹಂತದ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆಗಳಲ್ಲಿ ಮೈಮರೆತು ತಲ್ಲೀನರಾದಾಗ ಸಿಗುವ ಮಾನಸಿಕ ನೆಮ್ಮದಿಗೆ ಎಲ್ಲೆಯಿಲ್ಲ. ಜೀವನದಲ್ಲಿ ಹಣ ಗಳಿಕೆ ಮಾಡಬಹುದು. ಆದರೆ ಆರೋಗ್ಯ ಗಳಿಕೆ ಅಸಾಧ್ಯ. ವಿದ್ಯಾರ್ಥಿ ದೆಸೆಯಿಂದ ಕ್ರೀಡಾ ತರಬೇತಿ ಪಡೆದು ಸ್ಪರ್ಧಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಾಲ್ಲೂಕಿನ ವಿದ್ಯಾಸಂಸ್ಥೆಯ ಕೀರ್ತಿ ಪತಾಕಿ ಹಾರಿಸಬೇಕು ಎಂದರು.

ಧರ್ಮ‌, ಜಾತಿ, ಲಿಂಗ ತಾರತಮ್ಯವಿಲ್ಲದೆ ಕ್ರೀಡಾ ರಂಗ ದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ತಮ್ಮ ಜೀವನದಲ್ಲಿ ಆಸಕ್ತಿದಾಯಕ ಕ್ಷೇತ್ರದಿಂದ ಸತತ ಪ್ರಯತ್ನದಿಂದ ಉತ್ತಮ ಸಾಧನೆಗೈಯ್ಯಬೇಕು ಎಂದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಬೇರೆ ಯಾವ ಕ್ಷೇತ್ರಕ್ಕಿಂತಲೂ ಕ್ರೀಡಾ ರಂಗ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲು  ಉತ್ತಮ ವೇದಿಕೆಯಾಗಿದೆ, ತೀರ್ಪುಗಾರರು ಪ್ರಾಮಾಣಿಕ ತೀರ್ಪು ನೀಡಬೇಕು.ಕ್ರೀಡಾಪಟುಗಳು ವೈಯಕ್ತಿಕ  ದ್ವೇಷ ತೊರೆದು ಸ್ಪರ್ಧಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಜ್ಯೋತಿ ಸ್ವೀಕರಿಸಿ, ನಂತರ ವಾಲಿಬಾಲ್ ಮಹಿಳಾ ವಿಭಾಗ ದಿಂದ ಪ್ರಥಮ‌ ಸ್ಥಾನ ಗಳಿಸಿದ ಎನ್. ಎಂ.ಕೆ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಶೀಲ್ಡ್ ವಿತರಿಸಿದರು.

ಈ ಸಂದರ್ಭದಲ್ಲಿ ಬಿಇಓ ಹಾಲಮೂರ್ತಿ, ಉಪಪ್ರಾಂಶುಪಾಲ ಹಾಲಪ್ಪ, ಕೊಟ್ರೇಶ್, ಆರ್.ವಿ.ಎಸ್ ಸಂಸ್ಥೆ ಕಾರ್ಯದರ್ಶಿ ವೀರೇಶ್, ಅನುದಾನ ರಹಿತ ಖಾಸಗಿ ಶಾಲಾ ಸಂಘದ ಅಧ್ಯಕ್ಷ ಎನ್.ಎಂ. ಲೋಕೇಶ್, ಕಾರ್ಯದರ್ಶಿ ಪಿ.ಎಸ್.ಅರವಿಂದನ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸುರೇಶ್ ರೆಡ್ಡಿ, ಮುಖಂಡರಾದ ಸಿ.ತಿಪ್ಪೇಸ್ವಾಮಿ, ಕಲ್ಲೇಶ್ ರಾಜ್ ಪಟೇಲ್, ಪಲ್ಲಾಗಟ್ಟೆ ಶೇಖರಪ್ಪ, ಪ್ರಕಾಶ್ ರೆಡ್ಡಿ, ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಮತ್ತಿತರರು  ಇದ್ದರು.

error: Content is protected !!