ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಕಾರ್ಯಕ್ರಮ
ದಾವಣಗೆರೆ, ಸೆ. 1- ನಮ್ಮ ಬದುಕಿಗೆ ಚೌಕಟ್ಟು ಹಾಕಿ, ನಾವು ಹೇಗೆ ಬದುಕಬೇಕೆಂದು ತೋರಿಸುವ ವಚನ ಸಾಹಿತ್ಯ `ಬದುಕಿನ ಸಂವಿಧಾನ’ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷರೂ, ಎವಿಕೆ ಮಹಿಳಾ ಕಾಲೇಜು ವಿಶ್ರಾಂತ ಪ್ರಾಧ್ಯಾಪಕರೂ ಆದ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ಬಣ್ಣಿಸಿದರು.
ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ನಿನ್ನೆ ಏರ್ಪಾಡಾಗಿದ್ದ ಮಹಾಶರಣ ಲಿಂ.ಮಾಗನೂರು ಬಸಪ್ಪ ಮತ್ತು ಲಿಂ.ಸರ್ವಮಂಗಳಮ್ಮ ಸ್ಮಾರಕ ದತ್ತಿ ಮತ್ತು ವಚನ ದಿನಾಚರಣೆ ಕಾರ್ಯಕ್ರಮದಲ್ಲಿ `ವಚನ ಸಾಹಿತ್ಯ ಮತ್ತು ಮಾಗನೂರು ಬಸಪ್ಪ’ ವಿಷಯ ಕುರಿತು ಅವರು ಮಾತನಾಡಿದರು.
ವಚನಕಾರರು ಸತ್ಯದ ಆರಾಧಕರೂ, ನಡೆ-ನುಡಿ ನಡುವೆ ಸಮನ್ವಯತೆ ಸಾಧಿಸಿದವರು. ಅವರ ಅರಿವು, ಆಚಾರ, ಅನುಭಾವ ವಚನ ಸಾಹಿತ್ಯದಲ್ಲಿದೆ. ಇಂದಿನ ರೋಗಗ್ರಸ್ಥ ಸಮಾಜಕ್ಕೆ ವಚನ ಸಾಹಿತ್ಯ ಔಷಧವಿದ್ದಂತೆ. ವಚನ ಸಾಹಿತ್ಯ ಅಳವಡಿಸಿಕೊಂಡರೆ ಮಾತ್ರ ನಾಗರಿಕ ಸಮಾಜ ಕಟ್ಟಲು ಸಾಧ್ಯವಿದೆ ಎಂದು ಅಭಿಪ್ರಾಯಿಸಿದರು.
ಅಧರ್ಮದಿಂದ ಧರ್ಮದ ಕಡೆಗೆ, ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ಮೂಲಕ ವಚನ ಸಾಹಿತ್ಯ ಮನುಷ್ಯನಿಗೆ ಸಂಸ್ಕಾರ ನೀಡುತ್ತದೆ. ಅದನ್ನು ಅಳವಡಿಸಿಕೊಂಡರೆ ಮನುಷ್ಯ ದೇವಾತ್ಮನಾಗುತ್ತಾನೆ. ಇಲ್ಲದಿದ್ದರೆ ಪಾಪಾತ್ಮನಾಗಿ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಪ್ರಸ್ತುತ ದಿನಗಳಲ್ಲಿ ವಾದಿಗಳು, ವಿಚಾರ ವಂತರ ಸಂಖ್ಯೆಯಿಂದ ಜಗತ್ತು ವಾದಗಳ ಯುಗವಾಗಿ ಪರಿಣಮಿಸಿದೆ. ವಚನ ಸಾಹಿತ್ಯದ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ 12ನೇ ಶತಮಾನವನ್ನು 21ನೇ ಶತಮಾನಕ್ಕೆ ಕರೆತರುವ ಸಾಮರ್ಥ್ಯ ನಮ್ಮೆಲ್ಲರಿಗಿದೆ ಎಂದರು.
ದೇಶದಲ್ಲಿ ಗುಂಡು ಸೂಜಿಯನ್ನೂ ಉತ್ಪಾದಿಸಲು ಸಾಧ್ಯವಾಗದ ವ್ಯವಸ್ಥೆಯಲ್ಲಿ ಸಾಮಾಜಿಕ ಹಾಗೂ ನೈತಿಕ ಮೌಲ್ಯಗಳು ಉನ್ನತ ಮಟ್ಟದಲ್ಲಿದ್ದವು. ಆದರೆ ಇಂದು ಚಂದ್ರನ ಮೇಲೆ ನೌಕೆ ಕಳುಹಿಸುವಷ್ಟು ವಿಜ್ಞಾನ, ತಂತ್ರಜ್ಞಾನ ಮುಂದುವರೆದ ದಿನಗಳಲ್ಲಿ ಮೌಲ್ಯಗಳು ನೆಲಕಚ್ಚಿವೆ. ಈ ಸಂದರ್ಭದಲ್ಲಿ ವಚನ ಸಾಹಿತ್ಯ ಕೇಳಿ ಅಂತರಂಗದ ಅರಿವಿನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಮತ್ತೊಬ್ಬರ ಬಾಳಿಗೆ ಬೆಳಕಾಗಿ ಬಾಳಲು ಸಾಧ್ಯ ಎಂದರು.
ಶರಣರ ತತ್ವಾದರ್ಶಗಳನ್ನು ಜಗತ್ತಿಗೆ ಉಣಬಡಿಸಿ ಜನರ ಅರಿವಿನ ವ್ಯಾಪ್ತಿಯನ್ನು ಹಿಗ್ಗಿಸುವ ದೃಷ್ಟಿಯಿಂದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರು 1986ರ ಆಗಸ್ಟ್ 29ರಂದು ಶರಣ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಪ್ರಸ್ತುತ ಶರಣ ಸಾಹಿತ್ಯ ಪರಿಷತ್ನಲ್ಲಿ 630 ದತ್ತಿಗಳು ಸ್ಥಾಪನೆಗೊಂಡಿದ್ದು, ಕನ್ನಡ ಸಾಹಿತ್ಯ ಪರಿಷತ್ಗೆ ಸಮಾನವಾಗಿ ಬೆಳೆಯುತ್ತಿದೆ ಎಂದರು.
ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಸಬ ಕಾಲೇಜು ಪ್ರಾಂಶುಪಾಲರಾದ ಎಸ್.ಜಿ. ಶಾಂತರಾಜು, ಪ್ರೊ. ಜಿ.ಸಿ. ನೀಲಾಂಬಿಕ, ಎವಿಕೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ಕಮಲಾ ಸೊಪ್ಪಿನ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ವಿನೋದ ಅಜಗಣ್ಣನವರ್ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಣಧೀರ ಸ್ವಾಗತಿಸಿದರು. ಎಂ.ಸಹನಾ, ನೇತ್ರಾ ಪಿ. ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ಕವಿತ ಆರ್.ಜಿ. ನಿರೂಪಿಸಿದರು.
ಡಾ.ಮಾಚಿಹಳ್ಳಿ ಮಂಜಪ್ಪ ವಂದಿಸಿದರು.