ಮಲೇಬೆನ್ನೂರು, ಸೆ. 1- ಹರಳಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕೆರೆಯ ಸಮಿತಿಯನ್ನು ದಾವಣಗೆರೆ ಜಿಲ್ಲೆಯ ಅತ್ಯುತ್ತಮ ಕೆರೆ ಸಮಿತಿ ಎಂದು ಗುರುತಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್. ಮಂಜುನಾಥ್ ಅವರು ಅಭಿನಂದನಾ ಪತ್ರ ನೀಡಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಈ ವರ್ಷ ಜನವರಿ ತಿಂಗಳಲ್ಲಿ ಹರಳಹಳ್ಳಿ ಗ್ರಾಮದ ಸುಮಾರು 20 ಎಕರೆ ಪ್ರದೇಶದ ಕೆರೆಯನ್ನು ಹೂಳು ತೆಗೆಸಿ ನಂತರ ಕೆರೆಯ ಸುತ್ತಲು ಕಲ್ಲು ಕಟ್ಟಿ ಸುಂದರ ಕೆರೆಯನ್ನಾಗಿ ಗ್ರಾಮಸ್ಥರ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ನಂತರ ಆ ಕೆರೆಗೆ ನೀರು ತುಂಬಿಸಿ ಕೆರೆಯ ಸುತ್ತಲು ಗಿಡಗಳನ್ನು ನೆಟ್ಟು ಹೊಸ ರೂಪ ನೀಡಿದ ಗ್ರಾಮಸ್ಥರು ಕೆರೆಯ ನಿರ್ವಹಣೆಯ ಬಗ್ಗೆ ಕಾಳಜಿ ವಹಿಸಿರುವುದಕ್ಕೆ ನೀಡಿರುವ ಅಭಿನಂದನಾ ಪತ್ರವನ್ನು ಶುಕ್ರವಾರ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅವರು ಕೆರೆ ಸಮಿತಿಯವರಿಗೆ ನೀಡಿದರು.
ಅಲ್ಲದೇ ಇದೇ ವೇಳೆ ಜಿಲ್ಲೆಯಲ್ಲಿ ಧರ್ಮಸ್ಥಳ ಯೋಜನೆಯಿಂದ ಅಭಿವೃದ್ಧಿ ಪಡಿಸಿರುವ ಕೆರೆಗಳ ಸಮಿತಿ ಸದಸ್ಯರ ಸಭೆಯನ್ನು ನಡೆಸಿ, ಕೆರೆ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿ ನೀಡಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ಪ್ರಗತಿಪರ ಕೃಷಿಕ ಡಾ.ಎನ್.ಎಸ್. ವೆಂಕಟರಾಮಾಂಜನೇಯ, ಕೆರೆ ಮತ್ತು ಶುದ್ಧಗಂಗಾ ವಿಭಾಗದ ನಿರ್ದೇಶಕ ಶಿವಾನಂದ ಆಚಾರ್ಯ ಕೆರೆ ಅಭಿಯಂತರ ಹರೀಶ ಮತ್ತು ಜಿಲ್ಲೆಯ ಕೃಷಿ ಮೇಲ್ವಿಚಾರಕರಾದ ಗಂಗಾಧರ್, ಪ್ರವೀಣ್, ಪ್ರೇಮ್ ಕುಮಾರ್, ಶಂಬುಲಿಂಗಪ್ಪ, ನಟರಾಜ್, ಸುನೀಲ್ ಮತ್ತಿತರರು ಸಭೆಯಲ್ಲಿದ್ದರು.
ಹರಳಹಳ್ಳಿ ಆಂಜನೇಯಸ್ವಾಮಿ ಕೆರೆ ಸಮಿತಿಯ ಎನ್. ರವಿಕುಮಾರ್, ಭಾರತಮ್ಮ ಬಿ.ಟಿ. ಹನುಮಂತಪ್ಪ, ಜಗನ್ನಾಥ್, ಕರಿಬಸಪ್ಪ, ಹರೀಶ ಈ ವೇಳೆ ಹಾಜರಿದ್ದು ಪ್ರಶಸ್ತಿ ಸ್ವೀಕರಿಸಿದರು.