ಹರಪನಹಳ್ಳಿ ಕಾರ್ಯಕ್ರಮದಲ್ಲಿ ಸಂಸದ ವೈ. ದೇವೇಂದ್ರಪ್ಪ
ಹರಪನಹಳ್ಳಿ, ಸೆ.1- ಈ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ದೇಶದ ಸತ್ಪ್ರಜೆಗಳನ್ನಾಗಿ ಮಾಡಬೇಕು ಎಂದು ಸಂಸದ ವೈ. ದೇವೇಂದ್ರಪ್ಪ ಹೇಳಿದರು. ತಾಲ್ಲೂಕಿನ ಅರಸೀಕೆರೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು
ನಾನು ಇದೇ ಶಾಲೆಯಲ್ಲಿ ಓದಿದ್ದೇನೆ, ಈಗ ಈ ಶಾಲೆಗೆ 100 ವರ್ಷ ತುಂಬಿದೆ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಸಂಸದರ ಅನುದಾನದಲ್ಲಿ 5ನೇ ತರಗತಿಯಿಂದ 10ನೇ ತರಗತಿ ಮಕ್ಕಳಿಗೆ ಹಾಸ್ಟೆಲ್ ಮಂಜೂರು ಮಾಡಲಾಗಿದೆ. ಈ ಶಾಲೆಗೆ ನಾಲ್ಕು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಹೊಸದಾಗಿ ಹೈಟೆಕ್ ಶೌಚಾಲಯ, ಅಡುಗೆ ಕೋಣೆ ಮಂಜೂರಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಡಿ. ಹನುಮಂತಪ್ಪ, ಉಪಾಧ್ಯಕ್ಷೆ ಅನಿತಾ, ಸದಸ್ಯ ವೈ.ರಂಗಪ್ಪ, ಮುಖಂಡರಾದ ಅಬ್ದುಲ್ ಸಾಬ್, ಶಾಲಾ ಪ್ರಭಾರಿ ಮುಖ್ಯ ಗುರುಗಳಾದ ಹಾಲಪ್ಪ, ಸಹ ಶಿಕ್ಷಕರಾದ ಬಂದಮ್ಮ, ಮಾಲತೇಶ್ ಪಾಟೀಲ್, ಕೆಂಪಪ್ಪ, ರೇಣುಕಾ, ಚೇತನ, ಗಿರಿಜಾ, ತಾಸೀನಾ ಬೇಗಂ ಹಾಗೂ ಸೌಜನ್ಯ ಹಾಜರಿದ್ದರು.