ಹಿಂದುಳಿದವರಿಗೆ ಶಿಕ್ಷಣ ನೀಡಿದ್ದ ನಾರಾಯಣ ಗುರು ಆದರ್ಶ ವ್ಯಕ್ತಿಯಾಗಿದ್ದ ನುಲಿಯ ಚಂದ್ರಯ್ಯ : ಹರೀಶ್

ಹಿಂದುಳಿದವರಿಗೆ ಶಿಕ್ಷಣ ನೀಡಿದ್ದ ನಾರಾಯಣ ಗುರು ಆದರ್ಶ ವ್ಯಕ್ತಿಯಾಗಿದ್ದ ನುಲಿಯ ಚಂದ್ರಯ್ಯ : ಹರೀಶ್

ಹರಿಹರ, ಆ. 31 – ದೇವರ ಪೂಜೆ ಮುಖ್ಯವಲ್ಲ, ಹಿಂದುಳಿದ ವರ್ಗದವರಿಗೆ ಶಿಕ್ಷಣ ಕೊಡುವುದು ಮುಖ್ಯ ಎಂಬುದು ಬ್ರಹ್ಮ ಶ್ರೀ ನಾರಾಯಣ ಗುರುಗಳ ನಿಲುವಾಗಿತ್ತು. ಈ ಕಾರಣದಿಂದ ಅನೇಕ ಶಾಲಾ-ಕಾಲೇಜು ಸೇರಿದಂತೆ, ವಿವಿಧ ಶಿಕ್ಷಣ ಸಂಸ್ಥೆಗಳನ್ನು ತೆರೆದು ಆ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ಹಾಗೂ ನುಲಿಯ ಚಂದಯ್ಯ ಜಯಂತಿ ಆಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಜಂಗಮ ದಾಸೋಹ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡಿದ ನುಲಿಯ ಚಂದ್ರಯ್ಯ, ಇಂತಹ ಇಬ್ಬರು ಮಹಾನ್ ದಾರ್ಶನಿಕರ ಆದರ್ಶಗಳನ್ನು ಹಿಂದಿನ ಯುವಕರು ಮೈಗೂಡಿಸಿಕೊಂಡು ಹೋಗುವಂತೆ ಹರೀಶ್ ಹೇಳಿದರು.

ಇಂತಹ ಮಹಾನ್ ಸಾಧಕರನ್ನು ಒಂದು ಜಾತಿಗೆ ಸೇರಿಸಿದಾಗ ಮತ್ತೆ ಅವರು ಮೇಲು, ಇವರು ಕೀಳು ಎಂಬ ಮಾತುಗಳಿಗೆ ಅವಕಾಶವನ್ನು ನೀಡುತ್ತದೆ. ಅವರನ್ನು ಜಾತಿಗೆ ಸೀಮಿತವಾಗಿ ನೋಡಬಾರದು ಎಂದು ಹೇಳಿದರು. 

ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಮಾತನಾಡಿ, ನಾರಾಯಣ ಗುರುಗಳು 1854 ರಲ್ಲಿ ಜನಿಸಿ, ಅನಿಷ್ಟ ಪದ್ಧತಿಯನ್ನು, ಮಹಿಳೆಯರ ಮೇಲೆ ನಡೆಯುತ್ತಿದ್ದ ದರ್ಪ, ದೌರ್ಜನ್ಯ ತೊಲಗಿಸಲು ಸಾಕಷ್ಟು ಶ್ರಮವಹಿಸಿದ್ದರು. ಕೇರಳದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಕೆಲಸ ಮಾಡಿದ್ದರು ಎಂದರು.

ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ಮಾತನಾಡಿ, ನುಲಿಯ ಚಂದ್ರಯ್ಯನವರು 1130 ರಲ್ಲಿ ಬಿಜಾಪುರ ಜಿಲ್ಲೆಯ ಶಿವಗೆಣಿ ಗ್ರಾಮದಲ್ಲಿ ಜನಿಸಿ ಬಸವಣ್ಣನವರ ಕಾಲದಲ್ಲಿ ಹಗ್ಗವನ್ನು ನೂಲುವ ಕಾಯಕ ಮಾಡಿದರು. ಸಮಾಜದ ಆದರ್ಶ ವ್ಯಕ್ತಿಯಾಗಿ ಬಾಳಿದ್ದರು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾಪಂ ಇಓ ಎನ್ ರವಿ, ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯ ಕೆ.ಬಿ. ರಾಜಶೇಖರ, ಚಂದ್ರಣ್ಣ, ಕೃಷ್ಣಮೂರ್ತಿ, ಬಸಣ್ಣ, ಭೀಮಣ್ಣ, ಹನುಮಂತಪ್ಪ,  ಪ್ರೀತಂ ಬಾಬು, ರಾಘವೇಂದ್ರ ಕೊಂಡಜ್ಜಿ, ಅನಿಲ್ ಕುಮಾರ್, ಪಾಂಡು ಗಾಂಧಿ ಇತರರು ಹಾಜರಿದ್ದರು

error: Content is protected !!