`ಗ್ಯಾರಂಟಿ’ ಲಾಭ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕು

`ಗ್ಯಾರಂಟಿ’ ಲಾಭ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಬೇಕು

ಜಗಳೂರಿನಲ್ಲಿ ಶಾಸಕ ಬಿ.ದೇವೇಂದ್ರಪ್ಪ  

ಜಗಳೂರು, ಆ. 31- ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಬಡವರ, ಕೂಲಿಕಾರ್ಮಿಕರ,ಮಹಿಳೆಯರ ಪರವಾಗಿದ್ದು, ಇಂದಿಗೆ 100 ದಿನಗಳನ್ನು ಪೂರೈಸಿದೆ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳನ್ನು ಪಡೆಯುವ ಮೂಲಕ ಮಹಿಳೆಯರು ಸ್ವಾವಲಂಬಿ ಗಳಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗ ದಲ್ಲಿ ಇಂದು ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳಲ್ಲಿ 4  ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ವಾರ್ಷಿಕವಾಗಿ  54000 ರೂ. ಕೋಟಿ ವ್ಯಯ ಭರಿಸಲಿದೆ.ಇದರಿಂದ ರಾಜ್ಯದ ಅಭಿವೃದ್ದಿ ಕಾಮಗಾರಿಗಳು ಕೆಲ ತಿಂಗಳುಗಳ ಕಾಲ ಕುಂಠಿತವಾಗಬಹುದು. ಆದರೆ ಜನತೆಯ ವಿಶ್ವಾಸ ಗಳಿಸಿದೆ. ನಮ್ಮ ಪಕ್ಷದ ಪ್ರಣಾಳಿಕೆಗಳು ಜಾತ್ಯತೀತ, ಪಕ್ಷಾತೀತವಾಗಿವೆ.

ವಿಧಾನಸಭಾ ಕ್ಷೇತ್ರದ 29‌ ಗ್ರಾಮ ಪಂಚಾಯಿತಿಗಳು 1 ಪಟ್ಟಣ ಪಂಚಾಯಿತಿ ಸೇರಿದಂತೆ ಗೃಹಲಕ್ಷ್ಮಿ ಯೋಜನೆಗೆ ವಿಧ್ಯುಕ್ತ  ಚಾಲನೆ ಕಾರ್ಯಕ್ರಮದ ವೀಕ್ಷಣಾ ಕಾರ್ಯಕ್ರಮ ನಡೆಯುತ್ತಿದ್ದು, ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರುವ ಮೂಲಕ ಸಂವಿಧಾನ ಉಳಿಸಬೇಕು ಎಂದು  ಅವರು ತಿಳಿಸಿದರು.

ನನಗೆ ಚುನಾವಣೆಯಲ್ಲಿ  ಆಶೀರ್ವಾದ ಮಾಡಿ ಶಾಸಕನನ್ನಾಗಿ ಆಯ್ಕೆ ಮಾಡಿದ ಮಹಿಳೆಯರ ಧ್ವನಿಯಾಗಿ ಕೆಲಸ ಮಾಡುವೆ ಎಂದು ಹೇಳಿದರು.

ತಹಶೀಲ್ದಾರ್ ಅರುಣ್ ಕಾರಗಿ ಮಾತನಾಡಿ, ತಾಲ್ಲೂಕಿನಲ್ಲಿ 42000 ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದು, ಶೇ. 87 ರಷ್ಟು ಮಹಿಳೆಯರು ನೊಂದಣಿ ಯಾಗಿದ್ದು, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿ ದ್ದಾರೆ. ಉಳಿದವರು ಶೀಘ್ರ ಆನ್ ಲೈನ್ ನೊಂದಣಿ ಯೊಂದಿಗೆ ಫಲಾನುಭವಿಗಳಾಗಬೇಕು  ಎಂದು ತಿಳಿಸಿದರು.

ಪಟ್ಟಣದಲ್ಲಿ ಗುರುಭವನ, ಪಟ್ಟಣ ಪಂಚಾಯಿತಿ, ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ‌ ನೀಡಿ ಸಾವಿರಾರು ಮಹಿಳೆಯರಿಗೆ ಶುಭ ಕೋರಿದರು. ಮಹಿಳೆಯರು ಸಂತಸ ಹಂಚಿಕೊಂಡರು.

ಸಮಾರಂಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ  ಕೆ.ಪಿ. ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್  ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ, ಲಲಿತಮ್ಮ, ಮಂಜಮ್ಮ,  ಸರೊಜಮ್ಮ, ಸಾವಿತ್ರಮ್ಮ, ದೇವರಾಜ್, ಲುಕ್ಮಾನ್, ಶಕೀಲ್ ಅಹಮ್ಮದ್, ಪಾಪಲಿಂಗಪ್ಪ, ಮುಖಂಡರಾದ  ಸಿ.ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ, ಪ್ರಕಾಶ್ ರೆಡ್ಡಿ, ಮಂಜುನಾಥ್, ಮಹಮ್ಮದ್ ಅಲಿ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮತ್ತಿತರರಿದ್ದರು.

error: Content is protected !!