ಗೃಹಲಕ್ಷ್ಮಿಯ ಅರ್ಧ ಹಣ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಿ : ಪೂರ್ಣಿಮ ಕೋಳಿವಾಡ

ಗೃಹಲಕ್ಷ್ಮಿಯ ಅರ್ಧ ಹಣ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಿ : ಪೂರ್ಣಿಮ ಕೋಳಿವಾಡ

ರಾಣೇಬೆನ್ನೂರು, ಆ. 31- ಗೃಹಲಕ್ಷ್ಮಿ ಯೋಜನೆಯ ಅರ್ಧದಷ್ಟು ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡಿ ಎಂದು ಶಾಸಕ ಪ್ರಕಾಶ ಕೋಳಿವಾಡ ಪತ್ನಿ ಪೂರ್ಣಿಮ ಕೋಳಿವಾಡ ಮಹಿಳೆಯರಿಗೆ ಮನವಿ ಮಾಡಿದರು.

ಅವರು  ತಾಲ್ಲೂಕಿನ ಗುಡಗೂರು, ಮೆಡ್ಲೇರಿ ಮತ್ತು ಗೋವಿಂದ ಬಡಾವಣೆಗಳಲ್ಲಿ ಗೃಹ ಲಕ್ಷ್ಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಗರೀಬಿ ಹಠಾವೋ ಸಿದ್ಧಾಂತಕ್ಕೆ ಬದ್ದವಾಗಿರುವ ಕಾಂಗ್ರೆಸ್ ಪಕ್ಷ, ಮಹಿಳೆಯರ ಸಬಲೀಕರಣಕ್ಕೂ ಬದ್ದವಾಗಿದ್ದು, ಮಹಿಳಾ ಶಕ್ತಿ, ಗೃಹ ಜ್ಯೊತಿ ಮತ್ತು ಗೃಹಲಕ್ಷ್ಮಿಯಂತಹ ಯೋಜನೆಗಳನ್ನು  ರೂಪಿಸಿ ಚುನಾವಣೆಯಲ್ಲಿ ರಾಜ್ಯದ ಜನರಿಗೆ ಕೊಟ್ಟ  ಮಾತಿನಂತೆ ನಾಲ್ಕು ಗ್ಯಾರಂಟಿಗಳನ್ನು  ಪೂರೈಸಿದೆ. ಡಿಸೆಂಬರ್ ವೇಳೆಗೆ ಯುವ ಶಕ್ತಿ ಜಾರಿಯಾಗಲಿದೆ ಎಂದು ಪೂರ್ಣಿಮ ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಪಕ್ಷದ ಐದು ಗ್ಯಾರಂಟಿಗಳ ಜೊತೆಗೆ, ನಿರುದ್ಯೋಗ ಮುಕ್ತ ರಾಣೇಬೆನ್ನೂರು ಕ್ಷೇತ್ರ, ಬರಗಾಲ ಮುಕ್ತ ಹಾವೇರಿ ಜಿಲ್ಲೆ ಹಾಗೂ ರೈತರಿಗೆ ದ್ರೋಣ್‌ ಪೂರೈಕೆಯ  ಮೂರು ಗ್ಯಾರಂಟಿಗಳನ್ನು ಘೋಷಿಸಿದ್ದ ನನ್ನ ಪತಿ ಶಾಸಕ ಪ್ರಕಾಶ ಕೋಳಿವಾಡ ಅವರು ಮೂರು ಗ್ಯಾರಂಟಿಗಳನ್ನು ಜಾರಿ ತರುವ  ಪ್ರಯತ್ನ ನಡೆಸಿದ್ದು, ಶೀಘ್ರದಲ್ಲಿಯೇ ಜನರನ್ನು ತಲುಪಲಿವೆ ಎಂದು ಪೂರ್ಣಿಮ ವಿವರಿಸಿದರು.

error: Content is protected !!