ನಾರಾಯಣ ಗುರೂಜಿ ಆದರ್ಶದಿಂದ ಸದೃಢ ಸಮಾಜ

ನಾರಾಯಣ ಗುರೂಜಿ ಆದರ್ಶದಿಂದ ಸದೃಢ ಸಮಾಜ

ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಅಭಿಮತ

ದಾವಣಗೆರೆ, ಆ. 31 – ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆರ್ಯ ಈಡಿಗ ಸಮಾಜಗಳ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಇಂದು ಜರುಗಿದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುರಾತನ ಕಾಲದಿಂದಲೂ ಹಲವಾರು ತಳ ಸಮು ದಾಯದವರು ನಿರಂತರ ಶೋಷಣೆಗೆ ಒಳಗಾಗಿದ್ದಾರೆ. ಶೋಷಣೆಯ ವಿರುದ್ಧ ಬಲವಾದ ಧ್ವನಿ ಎತ್ತಿ ಹಾಗೂ ಸಮಾಜದಲ್ಲಿ ಬದಲಾವಣೆ ತರುವಲ್ಲಿ ನಾರಾಯಣ ಗುರುಗಳ ಪಾತ್ರ ಬಹು ಮುಖ್ಯವಾದದ್ದು. ಒಂದೇ ಜಾತಿ, ಒಂದೇ ಧರ್ಮ, ಒಬ್ಬ ಮಾನವ ಎಂಬ ಘೋಷವಾಕ್ಯದೊಂದಿಗೆ ಸಮಾಜವನ್ನು ಪರಿವರ್ತನೆ ಮಾಡುವಲ್ಲಿ ಶ್ರಮಿಸಿದವರು ಎಂದರು.

ಮೇಲ್ವರ್ಗದವರಿಂದ ತುಳಿತಕ್ಕೊಳಗಾದ ಎಲ್ಲಾ ಸಮುದಾಯಗಳು ಶಿಕ್ಷಣ, ಸಂಘಟನೆ, ವ್ಯಾಪಾರ ವಹಿವಾಟು, ಕೃಷಿಯಲ್ಲಿ ತಾಂತ್ರಿಕತೆ ಹಾಗೂ ಗ್ರಾಮೀಣ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಂತಹ ಕಾರ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ನಾರಾಯಣ ಗುರುಗಳು ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ ಹಾಗೂ ಮೊದಲಾದ ಅನಿಷ್ಟ ಪದ್ಧತಿಗಳಿಗೆ ವಿದಾಯ ಹೇಳಿದರು ಎಂದರು.

ಹರಿಹರದ ವಿದುಷಿ ನೃತ್ಯ ಶಾಲೆಯ ವಿದ್ಯಾರ್ಥಿಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆ ಕುರಿತು ನೃತ್ಯ ಪ್ರದರ್ಶಿಸಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ವಾಸಂತಿ ಉಪ್ಪಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಪಾಲಿಕೆ ಸದಸ್ಯ ಎ. ನಾಗರಾಜ್, ರುದ್ರಪ್ಪ ಎನ್. ಮಾರುತಿ ಶಾಲೆಮನೆ, ಆರ್ಯ ಈಡಿಗ ಸಮಾಜದ ಜಿಲ್ಲಾ ಅಧ್ಯಕ್ಷ ಹೆಚ್. ಶಂಕರ್, ಸಮಾಜದ ಮುಖಂಡರು ಉಪಸ್ಥಿತರಿದ್ದರು.

error: Content is protected !!