ನುಲಿಯ ಚಂದಯ್ಯನವರ ತತ್ವಾದರ್ಶ ಪಾಲನೆ ಅಗತ್ಯ : ಜಿಲ್ಲಾಧಿಕಾರಿ ವೆಂಕಟೇಶ್‌

ನುಲಿಯ ಚಂದಯ್ಯನವರ ತತ್ವಾದರ್ಶ ಪಾಲನೆ ಅಗತ್ಯ : ಜಿಲ್ಲಾಧಿಕಾರಿ ವೆಂಕಟೇಶ್‌

 ದಾವಣಗೆರೆ, ಆ. 31- ಕಾಯಕಯೋಗಿ ನುಲಿಯ ಚಂದಯ್ಯ ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವ ಎಂದರೇನು ಮತ್ತು ಅದರ ಪರಿಕಲ್ಪನೆಯ ಮಹತ್ವವನ್ನು ಜನಸಾಮಾನ್ಯರಿಗೆ ಅತ್ಯಂತ ಸರಳ ಮತ್ತು ಸುಲಭವಾಗಿ ತಮ್ಮ ವಚನಗಳಲ್ಲಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.

ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕೊರಚ, ಕೊರಮ ಸಮಾಜ ಇವರ ಸಹಯೋಗದೊಂದಿಗೆ ಜಿಲ್ಲಾ ಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜರುಗಿದ ಶ್ರೀ ಕಾಯಕಯೋಗಿ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

12ನೇ ಶತಮಾನವನ್ನು ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಕಾಲವಾಗಿದೆ ಬಸವಣ್ಣ, ಅಲ್ಲಮ್ಮ ಪ್ರಭು, ಅಕ್ಕಮಹಾದೇವಿ ಇವರ ಸಮಕಾಲೀನರಾದ ಶಿವಶರಣ, ಕಾಯಕ ಯೋಗಿ ನುಲಿಯ ಚಂದಯ್ಯನವರು ಮಾದರಿ ಸಮಾಜದ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಎಂದರು.  

ಸಮಾಜದ ಕಟ್ಟಕಡೆಯ ವ್ಯಕ್ತಿ ಅನುಭವಿಸುತ್ತಿರುವಂತಹ ಶೋಷಣೆ, ಸಂಕಷ್ಟಗಳನ್ನು ವಿಮರ್ಶಿಸಿ, ವಿಶ್ಲೇಷಿಸಿ ಸೂಕ್ತ ಪರಿಹಾರಗಳನ್ನು ನೀಡಿದ್ದಾರೆ. ಕಾಯಕವನ್ನು ಆಚರಿಸಬೇಕು, ಯಾವುದೇ ವ್ಯಕ್ತಿ ತಾನು ಹುಟ್ಟಿದ ಮೇಲೆ ಇಷ್ಟವಾದ ಕೆಲಸವನ್ನು ಮಾಡಬೇಕು ಮತ್ತು ತಾನು ಮಾಡಿದ ಕಾಯಕಕ್ಕೆ ಅನುಗುಣವಾಗಿ ಹಣವನ್ನು  ಸಂಪಾದಿಸಬೇಕು, ಅತಿಯಾಸೆ ಮಾಡಬಾರದು ಎಂಬುದು ಅವರ ಧ್ಯೇಯವಾಗಿತ್ತು. ಆದ್ದರಿಂದ ಅವರ ಆದರ್ಶ, ಚಿಂತನೆಗಳನ್ನು ಸಮಾಜದ ಎಲ್ಲಾ ವರ್ಗದ ಜನರೂ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕೊರಚ ಸಮಾಜದ ಮುಖಂಡರಾದ ರಾಜು ಪಾಟೀಲ್ ಮಾತನಾಡಿ,  ಕಾರ್ಯಕ್ರಮ ದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಿಪೂರ್ವಕವಾಗಿ ಸಂಘದ ಎಲ್ಲಾ ಹಂತದ ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸಮಾಜದ ಹಿರಿಯರು, ಚಿಂತಕರು, ಸೇರಿದಂತೆ ಎಲ್ಲರ ಒಟ್ಟುಗೂಡಿ ಜಯಂತಿ ಆಚರಿಸಬೇಕು. ಈ ವೇಳೆ ಶರಣರ ಕಾಯಕಗಳ ಬಗ್ಗೆ ಯುವ ಜನರಿಗೆ ತಿಳಿಸುವಂತಾಗಬೇಕು ಎಂದರು.  

ಜಿಲ್ಲಾ ಪಂಚಾಯತ್ ಉಪನಿರ್ದೇಶಕಿ ಶಾರದ ಗೌಡ್ರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಕೊರಚ, ಕೊರಮ ಸಮಾಜದ ಮುಖಂಡರಾದ ಆನಂದಪ್ಪ, ಮಾರಪ್ಪ, ಕೆ.ಜಿ. ಮಂಜಪ್ಪ, ಸಂತೋಷ್ ಕುಮಾರ್ ಇತರರು ಉಪಸ್ಥಿತರಿದ್ದರು.

error: Content is protected !!