ಕುಂಬಳೂರಿನ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಉಮಾದೇವಿ
ಮಲೇಬೆನ್ನೂರು, ಆ. 30- ಕುಂಬಳೂರು ಗ್ರಾಮದ ಪಿಎಸಿಎಸ್ ಸಭಾ ಭವನದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ `ಗೃಹಲಕ್ಷ್ಮಿ’ ಯೋಜನೆಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಮಾದೇವಿ ಎಂ.ಹೆಚ್. ಶಿವರಾಮಚಂದ್ರಪ್ಪ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಸುಜಾತ ಮಾತನಾಡಿ, ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ಸಿಕ್ಕಾಗ ಮಾತ್ರ ಅವರ ಪ್ರಗತಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೆಲಸ ಮಾಡಬೇಕೆಂದರು.
ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಎ.ಕೆ. ಹನುಮಂತಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಬದ್ಧತೆ ಹಾಗೂ ಜನಸಾಮಾನ್ಯರ ಬಗ್ಗೆ ಅವರಿಗಿರುವ ಕಾಳಜಿ ಇತರೆ ಪಕ್ಷಗಳಿಗೆ ಮಾದರಿಯಾಗಿದೆ. ಹಿಂದಿನ ಬಿಜೆಪಿ ಜನಪರ ಕೆಲಸ ಮಾಡದೇ ಭ್ರಷ್ಟಾಚಾರ ಮಾಡಿತು ಎಂದು ದೂರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಉಮಾದೇವಿ ಮಾತನಾಡಿ, ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ ದಿನವಾದ ಇಂದೇ ಗೃಹಲಕ್ಷ್ಮಿ ಯೋಜನೆಯನ್ನು ಅವರ ಮೊಮ್ಮಗ ರಾಹುಲ್‌ಗಾಂಧಿ ಉದ್ಘಾಟಿಸಿರುವುದು ಅವಿಸ್ಮರಣೀಯ ದಿನವಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲಾ ಜನರಿಗೆ ಅನುಕೂಲವಾಗಿದ್ದು, ಉಚಿತ ಬಸ್ ಪ್ರಯಾಣದಿಂದಾಗಿ ಮಹಿಳೆಯರ ಸಂಚಾರ ಹೆಚ್ಚಾಗಿರುವುದು ಕೂಡ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿದೆ ಎಂದರು.
ಗ್ರಾ.ಪಂ. ಉಪಾಧ್ಯಕ್ಷ ನಾಗೋಳ್ ಕಲ್ಲೇಶ್, ಸದಸ್ಯರಾದ ಲೀಲಾ ಶಿವಕುಮಾರ್, ಮಧು ತಿಮ್ಮೇಶ್, ಲಕ್ಷ್ಮಿದೇವಿ, ಹರೀಶ್, ಆನಂದ್, ದುರುಗಮ್ಮ, ಸುನಂದಮ್ಮ, ಗ್ರಾ.ಪಂ. ಕಾರ್ಯದರ್ಶಿ ರಾಜಕುಮಾರ್, ಹಾಲೇಶ್, ಆರೋಗ್ಯ ಸಹಾಯಕಿ ವಿಮಲಾ ಶೀಲಾ ಸೇರಿದಂತೆ ಇತರರು ಭಾಗವಹಿಸಿದ್ದರು.