ದಾವಣಗೆರೆ, ಆ. 30- ಪ್ರಧಾನಿ ನರೇಂದ್ರ ಮೋದಿ ಸರ್ಕಾರವು, ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ರೂ, ಹಾಗೂ ಉಜ್ವಲಾ ಯೋಜನೆ ಅಡಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದವರಿಗೆ 400 ರೂ, ನಷ್ಟು (ಸಬ್ಸಿಡಿ) ಕಡಿತ ಮಾಡಿ ದೇಶದ ಸಹೋದರಿಯರಿಗೆ ರಕ್ಷಾ ಬಂಧನದ ಉಡುಗೊರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಪಾಲಿಕೆ ಆವರಣದಲ್ಲಿ ಇಂದು ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಮುಖಂಡರು ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 9 ವರ್ಷದಲ್ಲಿ ವಿಶ್ವ ಶ್ಲ್ಯಾಘಿಸುವಂತಹ ಮಹತ್ವಾಕಾಂಕ್ಷಿ ಬದಲಾವಣೆಗಳನ್ನು ಮಾಡಿದ್ದಾರೆ ಎಂದರು.
ಹಿಂದಿನ ಸರ್ಕಾರದಲ್ಲಿ ದಶಕಗಳುದ್ದಕ್ಕೂ ಲಕ್ಷ ಲಕ್ಷ ಕೋಟಿ ಭ್ರಷ್ಟಾಚಾರ ಹಗರಣಗಳು ಬೆಳಕಿಗೆ ಬರುತ್ತಲೇ ಇದ್ದವು.
13, 14 ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕತೆಯೂ 10 ನೇ ಸ್ಥಾನಕ್ಕೆ ಬರಲು 30 ವರ್ಷ ತೆಗೆದುಕೊಂಡಿತು.
ಆದರೆ, ಮೋದಿ ನೇತೃತ್ವದಲ್ಲಿ ದೇಶ ಕೇವಲ 9 ವರ್ಷಗಳಲ್ಲಿ 10 ನೇ ಸ್ಥಾನದಿಂದ 5 ನೇ ಸ್ಥಾನಕ್ಕೇರಿ, ವಿಶ್ವದ ಆರ್ಥಿಕ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ ಎಂದು ಹೇಳಿದರು.
ಉಪ ಮಹಾಪೌರರಾದ ಯಶೋಧ ಹೆಗ್ಗಪ್ಪ ಮಾತನಾಡಿ, ಉಜ್ವಲ ಯೋಜನೆ ಅಡಿಯಲ್ಲಿ 25 ಲಕ್ಷ ಉಚಿತ ಹೊಸ ಎಲ್ ಪಿಜಿ ಕನೆಕ್ಷನ್ ಗಳನ್ನು ಒದಗಿಸಲು ತೀರ್ಮಾನಿಸಿರುವ ಕ್ರಮ ನಿಜಕ್ಕೂ ಶ್ಲ್ಯಾಘನೀಯ ಎಂದರು.
ಸಂಭ್ರಮಾಚರಣೆಯಲ್ಲಿ ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಆರ್ ಶಿವಾನಂದ್, ಗೋಣೆಪ್ಪ, ಡಿ.ಎಲ್.ಆರ್. ಶಿವಪ್ರಕಾಶ್, ಕೆ.ಎಂ. ವೀರೇಶ್, ಶಿಲ್ಪಾ ಜಯಪ್ರಕಾಶ್, ಗಾಯತ್ರಿಬಾಯಿ ಖಂಡೋಜಿರಾವ್, ರೇಣುಕಾ ಶ್ರೀನಿವಾಸ್, ಬಿಜೆಪಿ ಮುಖಂಡರಾದ ಸುರೇಶ್ ಗಂಡಗಾಳೆ, ಮುಕುಂದಪ್ಪ, ಜಯಪ್ರಕಾಶ್, ಶ್ರೀನಿವಾಸ್, ನಾಗಪ್ಪ, ಪದ್ಮನಾಬ್ ಶೆಟ್ಟಿ, ಮುಕುಂದಪ್ಪ. ಗಣೇಶ್ ಪವರ್, ಯುವ ಮುಖಂಡರಾದ ಸಚಿನ್ ವರ್ಣೇಕರ್, ಕಿರಣ, ಸಂತೋಷ್ ಕೋಟೆ, ದಂಡಪಾಣಿ, ರಘು ತೋಗಟ್, ರುದ್ರೇಶ್ ಭಾಗವಹಿಸಿದ್ದರು.