ಹರಪನಹಳ್ಳಿ, ಆ. 29- ಮಕ್ಕಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ, ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಗುರುತಿಸಿ ಹೊರ ತೆಗೆದು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಿ ಕಳಿಸುವಂತಹ ಕೆಲಸ ಶಿಕ್ಷಕರದ್ದಾಗಬೇಕು ಎಂದು ಯರಬಳ್ಳಿ ಉಮಾಪತಿ ಹೇಳಿದರು.
ತಾಲ್ಲೂಕಿನ ಯರಬಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಸೀಕೆರೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿ.ಪಂ. ಮಾಜಿ ಉಪಾಧ್ಯಕ್ಷ ಡಿ. ಸಿದ್ದಪ್ಪ ಮಾತನಾಡಿ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕು, ಇಂದಿನ ವಿದ್ಯಾರ್ಥಿಗಳೇ ಮುಂದಿನ ದೇಶದ ಉತ್ತಮ ಪ್ರಜೆಗಳಾಗಬೇಕು, ಊರಿನ ಎಲ್ಲರ ಸಹಕಾರದಿಂದ ಅದ್ಧೂರಿಯಾಗಿ ಪ್ರತಿಭಾ ಕಾರಂಜಿಯನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ. ಆರ್. ಪಿ. ಅಣ್ಣಪ್ಪ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕಥೆಗಾರ ಮಂಜಣ್ಣ, ನೌಕರರ ಸಂಘದ ಅಧ್ಯಕ್ಷ ರಾಮಪ್ಪ, ಪದ್ಮಲತಾ, ಅರ್ಜುನ್ ಪರುಸಪ್ಪ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಎಸ್ಡಿಎಂಸಿ ಅಧ್ಯಕ್ಷ ಎಸ್. ಅಜ್ಜಯ್ಯ, ಉಪಾಧ್ಯಕ್ಷರಾದ ಭಾಗ್ಯಮ್ಮ, ಗ್ರಾ.ಪಂ.ಅಧ್ಯಕ್ಷರಾದ ರಂಗಮ್ಮ, ಉಪಾಧ್ಯಕ್ಷರಾದ ಯಶೋಧಮ್ಮ, ಗ್ರಾ.ಪಂ. ಸದಸ್ಯರಾದ ಬಿ. ಸಿದ್ದೇಶ್, ಹೆಚ್. ಹನುಮಂತಪ್ಪ, ಚೌಡಮ್ಮ, ಮಂಜಮ್ಮ, ಸಿ. ಆರ್. ಪಿ. ಸಿದ್ದೇಶ್ವರ, ಬಂದಮ್ಮ, ಊರಿನ ಮುಖಂಡರಾದ ಜಾತಪ್ಪ, ಶ್ರೀಪತಿ, ಮುಖ್ಯ ಗುರುಗಳಾದ ಕರಿಬಸಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.