ನಾಲೆಯಲ್ಲಿನ ಹೂಳು ತೆಗೆಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ನಾಲೆಯಲ್ಲಿನ ಹೂಳು ತೆಗೆಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ

ಸ್ವಂತ ಖರ್ಚಿನಲ್ಲಿ ನಾಲೆ ಹೂಳು ತೆಗೆಸಲು ಮುಂದಾದ ಹರೀಶ್, ಶ್ರೀನಿವಾಸ್, ದ್ಯಾವಪ್ಪರೆಡ್ಡಿ

ಮಲೇಬೆನ್ನೂರು, ಆ.29- ದೇವರಬೆಳಕೆರೆ ಪಿಕಪ್ ಡ್ಯಾಂನ ಸಿದ್ದವೀರಪ್ಪ ನಾಲೆಯಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಸುವಂತೆ ನಾಲೆಯ ಕೊನೆ ಭಾಗದ ರೈತರು ಮಂಗಳವಾರ ನಂದಿತಾವರೆ ಬಳಿ ಪ್ರತಿಭಟನೆ ನಡೆಸಿದರು.

ಪಿಕಪ್ ಡ್ಯಾಂನಲ್ಲಿ ಸಾಕಷ್ಟು ನೀರಿದೆ. ಆದರೆ, ನಾಲೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ನಂದಿತಾವರೆ, ಭಾನುವಳ್ಳಿ, ಎಕ್ಕೆಗೊಂದಿ ಗ್ರಾಮಗಳ ವ್ಯಾಪ್ತಿಯ ಜಮೀನುಗಳಿಗೆ ನೀರು ಬರುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದ ತಕ್ಷಣ ಶಾಸಕ ಬಿ.ಪಿ.ಹರೀಶ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮತ್ತು ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪರೆಡ್ಡಿ ಅವರುಗಳು ಒಬ್ಬರ ನಂತರ ಒಬ್ಬರು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿದರು.

ಈ ವೇಳೆ ಸ್ಥಳದಲ್ಲಿದ್ದ ಭದ್ರಾ ನಾಲಾ ನಂ-3 ಉಪವಿಭಾಗದ ಎಇಇ ಧನಂಜಯ ಅವರು, ತಕ್ಷಣ ಹೂಳು ತೆಗೆಸಲು ನಮ್ಮ ಬಳಿ ಅನುದಾನ ಇಲ್ಲ ಎಂದು ಕೈ ಚೆಲ್ಲಿದರು.

ಆಗ ಶಾಸಕ ಹರೀಶ್ ಅವರು, ರೈತರಿಗೆ ತೊಂದರೆ ಆಗಿರುವುದನ್ನು ಗಮನಿಸಿ, ಸುಮಾರು 2 ಕಿ.ಮೀ ಉದ್ದ ನಾಲೆಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಸಲು ಇಟಾಚಿ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಬಗ್ಗೆ ರೈತರೊಂದಿಗೆ ಚರ್ಚಿಸಿದರು.

ಕೊನೆಗೆ ಶಾಸಕ ಹರೀಶ್ ಅವರು 10 ತಾಸು ಇಟಾಚಿಯ ಬಾಡಿಗೆ ಹಣ ನೀಡಲು ಮುಂದಾದರು. ಅದರಂತೆ ನಂದಿಗಾವಿ ಶ್ರೀನಿವಾಸ್, ವೈ.ದ್ಯಾವಪ್ಪರೆಡ್ಡಿ, ಭಾನುವಳ್ಳಿಯ ಬಲ್ಲೂರು ಕೆಂಚಪ್ಪ ಮತ್ತು ಎಇಇ ಧನಂಜಯ ಅವರೂ ತಲಾ 5 ತಾಸು ಇಟಾಚಿಯ ಬಾಡಿಗೆ ಹಣ ನೀಡುವುದಾಗಿ ಹೇಳಿ ಬುಧವಾರ ಮಧ್ಯಾಹ್ನದಿಂದ ಕೆಲಸ ಆರಂಭಿಸುವಂತೆ ರೈತರಿಗೆ ಹೇಳಿದಾಗ, ರೈತರು ಪ್ರತಿಭಟನೆ ಕೈಬಿಟ್ಟು ಹರೀಶ್, ಶ್ರೀನಿವಾಸ್, ದ್ಯಾವಪ್ಪರೆಡ್ಡಿ, ಕೆಂಚಪ್ಪ ಅವರಿಗೆ ಧನ್ಯವಾದ ಹೇಳಿದರು.

ರೈತ ಸಂಘದ ನಂದಿತಾವರೆ ಮುರುಗೇಂದ್ರಯ್ಯ, ಷಡಾಕ್ಷರಿ, ಗದಿಗೆಪ್ಪ, ಹರೀಶ್, ಭಾನುವಳ್ಳಿ ಪ್ರಕಾಶ್, ನಾರಾಯಣಪ್ಪ ಸೇರಿದಂತೆ ನೂರಾರು ರೈತರು ಈ ವೇಳೆ ಹಾಜರಿದ್ದರು.

error: Content is protected !!