ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಪೋಕ್ಸೋ ಕಾಯ್ದೆ ಅನ್ವಯ

ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಪೋಕ್ಸೋ ಕಾಯ್ದೆ ಅನ್ವಯ

ಕುಂಬಳೂರು : ಕಾನೂನು ಅರಿವು ಕಾರ್ಯಾಗಾರದಲ್ಲಿ ನ್ಯಾಯಾಧೀಶರಾದ ವೀಣಾ ಕೊಳೇಕರ್‌

ಮಲೇಬೆನ್ನೂರು, ಆ.28- ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನು ಸಮಾಜದಲ್ಲಿ ಬೇರೆ ದೃಷ್ಟಿಯಿಂದ ನೋಡಬಾರದೆಂದು ಹರಿಹರ ಜೆಎಂಎಫ್‌ಸಿ ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಶ್ರೀಮತಿ ವೀಣಾ ಕೊಳೇಕರ್‌ ಹೇಳಿದರು.

ಸೋಮವಾರ ಕುಂಬಳೂರು ಗ್ರಾಮದ ಬಸವ ಗುರುಕುಲ ಶಾಲೆಯ ಸಭಾ ಭವನದಲ್ಲಿ ತಾ. ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹರಿಹರ ಮತ್ತು ಬಿಇಓ ಆಫೀಸ್‌, ಹರಿಹರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 9 ರಿಂದ 12ನೇ ತರಗತಿಯ ಹೆಣ್ಣುಮಕ್ಕಳ ಹಕ್ಕುಗಳ ಘರ್ಷಣೆ ಮತ್ತು ಪೋಕ್ಸೋ ಕಾಯ್ದೆಯ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನು ಸಂತೈಷಿ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಮೊದಲು ಮಾಡಬೇಕು. ನಂತರ ಪೊಲೀಸ್‌ ಠಾಣೆಗೆ ದೌರ್ಜನ್ಯ ವೆಸಗಿದ ವ್ಯಕ್ತಿಯ ಮೇಲೆ ಮತ್ತು ಪ್ರೋತ್ಸಾಹಿಸಿದವರಿದ್ದರೆ ಅವರ ಮೇಲೂ ದೂರು ನೀಡಬೇಕೆಂದರು. 

ದೌರ್ಜನ್ಯಕ್ಕೆ ಒಳಗಾದವರ ಹೇಳಿಕೆಯನ್ನು ಪೊಲೀಸ್‌ ಠಾಣೆಯಲ್ಲಿ ಮತ್ತು ನ್ಯಾಯಾಲಯದಲ್ಲಿ ಗೌಪ್ಯವಾಗಿ ಇಡಲಾಗುವುದು. ಆ ಸಂದರ್ಭದಲ್ಲಿ ನೊಂದ ಮಹಿಳೆ ಅಥವಾ ಬಾಲಕಿ ನೀಡುವ ಹೇಳಿಕೆ ಆಧಾರದ ಮೇಲೆ ಅಪರಾಧಿಗಳಿಗೆ ಶಿಕ್ಷೆ ನೀಡಲಾಗುವುದು. 

ಆಗಿರುವ ಅನ್ಯಾಯ ಅಥವಾ ದೌರ್ಜನ್ಯವನ್ನು ಮುಚ್ಚಿಟ್ಟುಕೊಳ್ಳುವ ಕೆಲಸವನ್ನು ಯಾರೂ ಮಾಡಬೇಡಿ ಎಂದ ನ್ಯಾಯಾಧೀಶೆ ವೀಣಾ ಅವರು ಒಬ್ಬ ವ್ಯಕ್ತಿ ಕೆಟ್ಟ ದೃಷ್ಟಿಯಿಂದ ಮುಟ್ಟಿದರೂ ಅದು ಲೈಂಗಿಕ ದೌರ್ಜನ್ಯವಾಗುತ್ತದೆ ಎಂದರು.

ಪೋಕ್ಸೋ ಕಾಯ್ದೆ ಬಹಳ ಬಲ ಹೊಂದಿದ್ದು, 10 ವರ್ಷದಿಂದ ಹಿಡಿದು ಮರಣ ದಂಡನೆವರೆಗೂ ಅಪರಾಧಿಗಳಿಗೆ ಶಿಕ್ಷೆ ನೀಡುವ ಅವಕಾಶವಿದೆ. ಅಶ್ಲೀಲ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆ ಅಂತಹವರಿಗೆ 5 ವರ್ಷ ಶಿಕ್ಷೆ ವಿಧಿಸಲಾಗುವುದು. 18 ವರ್ಷದೊಳಗಿನ ಮಕ್ಕಳಿಗೆ ಪೋಕ್ಸೋ ಕಾಯ್ದೆ ಅನ್ವಯವಾಗಲಿದ್ದು, ಬಾಲಕ ಅಥವಾ ಬಾಲಕಿಯರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಅದನ್ನು ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್‌ ಮಾಡಬಹುದೆಂದು ನ್ಯಾಯಾಧೀಶರು ತಿಳಿಸಿದರು.

ಪೋಕ್ಸೋ ನೋಡಲ್‌ ಅಧಿಕಾರಿ ವೀರಪ್ಪ ಅವರು ಪೋಕ್ಸೋ ಕಾಯ್ದೆಯ ಸಂಪೂರ್ಣ ವಿವರ ಮತ್ತು ಯಾವ್ಯಾವ ರೀತಿ ದೌರ್ಜನ್ಯಗಳು ನಡೆಯುತ್ತವೆ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸರ್ಕಾರಿ ಅಭಿಯೋಜಕ ಪ್ರವೀಣ್‌ ಕುಮಾರ್‌, ಕ್ಷೇತ್ರ ಸಮನ್ವಯಾಧಿಕಾರಿ ಹೆಚ್‌. ಕೃಷ್ಣಪ್ಪ ಮಾತನಾಡಿದರು.

ಬಿಇಓ ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವ ಗುರುಕುಲ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕೆ. ತೀರ್ಥಪ್ಪ, ಕುಂಬಳೂರು ಸಿಆರ್‌ಪಿ ಕೆ.ಜಿ. ನಂಜುಂಡಪ್ಪ, ದೇವರಬೆಳಕೆರೆ ಸಿಆರ್‌ಪಿ ಸತೀಶ್‌ಕುಮಾರ್‌ ಹಾಗೂ ಇತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಶರಣ ಸಂಗಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ್‌ ಗುಂಡಣ್ಣನವರ್‌ ಸ್ವಾಗತಿಸಿದರು.

error: Content is protected !!