ಹರಪನಹಳ್ಳಿಯನ್ನು ಬರಪೀಡಿತ ತಾಲ್ಲೂಕೆಂದು ಘೋಷಿಸಲು ಒತ್ತಾಯ

ಹರಪನಹಳ್ಳಿಯನ್ನು ಬರಪೀಡಿತ ತಾಲ್ಲೂಕೆಂದು ಘೋಷಿಸಲು ಒತ್ತಾಯ

ರೈತ ಸಂಘಟನೆಗಳ ಒಕ್ಕೂಟದ ಪ್ರತಿಭಟನೆ

ಹರಪನಹಳ್ಳಿ, ಆ. 28-  ಮಳೆ ಬಾರದೆ ಸಾಕಷ್ಟು ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿರುವ ತಾಲ್ಲೂಕನ್ನು  ಬರ ಪೀಡಿತ ತಾಲ್ಲೂಕು ಎಂದು ಘೋಷಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ರೈತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರಗೆ ಮನವಿ ಸಲ್ಲಿಸಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಹೊರಟ ಪ್ರತಿಭಟನಾಕಾರರು ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿ ಹಕ್ಕೊತ್ತಾಯ ಮಂಡಿಸಿದರು.

ಹರಪನಹಳ್ಳಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರು.ಪರಿಹಾರ ನೀಡಬೇಕು, ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಹಾಗೂ ಸೊಸೈಟಿಗಳ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು.

2017-18ರಲ್ಲಿ ಪ್ರಧಾನ ಮಂತ್ರಿ ಬಿಮಾ ಫಸಲ್ ಯೋಜನೆಯಲ್ಲಿ  ಪಾವತಿಸಿದ್ದ ವಿಮೆ ಕುರಿತು ಅಂದು ಬರಗಾಲ ಎಂದು ಘೋಷಿಸಿದ್ದರೂ ವಿಮಾ ಕಂಪನಿಗಳು ರೈತರಿಗೆ ವಿಮಾ ಹಣ ಪಾವತಿಸಿರುವುದಿಲ್ಲ, ಆದ್ದರಿಂದ ಅಂದಿನ ವಿಮಾ ಹಣವನ್ನು ರೈತರಿಗೆ ಪಾವತಿಸಬೇಕು.

ಅನಂತನಹಳ್ಳಿ, ಮೆಳ್ಳೆಕಟ್ಟಿ, ತೊಗರಿಕಟ್ಟೆ, ಬಾಪೂಜಿನಗರ, ಹರಪನಹಳ್ಳಿ, ಹುಲ್ಲಿಕಟ್ಟಿ, ನಾರಾಯಣಪುರ ಮುಂತಾದ ಕಂದಾಯ ಗ್ರಾಮಗಳಲ್ಲಿ ರೈತರ ಭೂಮಿಗಳು ಇನ್ನೂ ಪೋಡಿಯಾಗಿಲ್ಲ, ಕೂಡಲೇ ಪೋಡಿ ಮಾಡಿಕೊಡಬೇಕು.

ರೈತರ ಜಮೀನುಗಳನ್ನು 11ಇ ನಕ್ಷೆ ಮಾಡಿಸಲು ಖಾಸಗಿ ಪರವಾನಿಗೆ ಭೂ ಮಾಪಕರು ರೈತರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದು, ಇಂತಹ ಭ್ರಷ್ಟ ಖಾಸಗಿ ಪರವಾನಿಗೆ ಭೂ ಮಾಪಕರನ್ನು ಹುದ್ದೆಯಿಂದ ಕಿತ್ತು ಹಾಕತಕ್ಕದ್ದು. ಕೆರೆಗಳಿಗೆ ನದಿ ನೀರು ತುಂಬಿಸುವ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು.

ಅರಸಿಕೇರಿ, ಬಾಗಳಿ, ಅಲಮರಸಿಕೇರಿ, ಹುಲಿಕಟ್ಟಿ, ಕನ್ನನಾಯಕನಹಳ್ಳಿ, ಹರಪನಹಳ್ಳಿ ನಾಯಕನ ಕೆರೆ, ಮುತ್ತಿಗೆ, ಮುಂತಾದ ಕೆರೆಗಳು ಒತ್ತುವರಿಯಾಗಿದ್ದು, ಕೂಡಲೇ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಹರಪನಹಳ್ಳಿ ಪಟ್ಟಣದ ಹೊಸಪೇಟೆ ರಸ್ತೆಯ ಪುಟ್ ಪಾತ್ ಒತ್ತುವರಿಯಾಗಿದ್ದು, ಪುಟ್ ಪಾತ್ ತೆರವಿಗೆ ಕ್ರಮ ಕೈಗೊಳ್ಳಬೇಕು. ಹೀಗೆ ವಿವಿಧ 16 ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮುಖಂಡರಾದ ಇದ್ಲಿ ರಾಮಪ್ಪ, ಸಂದೇರ ಪರಶುರಾಮ, ಕೆ.ರಾಜಪ್ಪ, ಎಚ್.ರಹಮತ್, ಕುದುರೆ ನಾಗರಾಜ, ಮಾಡಲಗೇರಿ ಬಸವರಾಜ, ಎ.ಡಿ.ದ್ವಾರಕೇಶ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!