ಹೊನ್ನಾಳಿ, ಆ.28- ಪಟ್ಟಣದ ದೇವನಾಯ್ಕನಹಳ್ಳಿ ಟಿ.ಬಿ. ವೃತ್ತದಲ್ಲಿ ಶ್ರಾವಣ ಸೋಮವಾರ ಶುಭ ಮೂಹೂರ್ತದಲ್ಲಿ ದಾಸ ಶ್ರೇಷ್ಟ ಕನಕದಾಸರ ಸುಂದರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್.ಪಾಲಾಕ್ಷಪ್ಪ ಅವರು, ಬೆಂಗಳೂರಿನ ಶಿಲ್ಪಿ ವಿಜಕುಮಾರ್ ಅವರು ಈ ಕಂಚಿನ ಪುತ್ಥಳಿಯನ್ನು ತಯಾರಿಸಿದ್ದು, ಈ ಮೂರ್ತಿ ಸುಮಾರು 8.25 ಅಡಿ ಎತ್ತರವಿದ್ದು, 10 ಲಕ್ಷ ರೂ. ವೆಚ್ಚದಲ್ಲಿ ಇದನ್ನು ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರಾವಣ ಸೋಮವಾರ ರಾಜಯೋಗ ಮೂಹೂರ್ತದ ಕಾರಣ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸೇರಿದಂತೆ ವಿವಿಧ ಸಚಿವರುಗಳು, ಸಮಾಜದ ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರನ್ನು ಆಹ್ವಾನಿಸಿ, ಅದ್ಧೂರಿ ಸಮಾರಂಭವನ್ನು ಆಯೋಜಿಸಿ, ವಿದ್ಯುಕ್ತವಾಗಿ ಪುತ್ಥಳಿಯ ಉದ್ಘಾಟನೆ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದರು. ಕನಕದಾಸರ ಪುತ್ಥಳಿಯನ್ನು ವಿವಿಧ ವಾದ್ಯಗಳೊಂದಿಗೆ ಪ್ರಸಿದ್ದ ಹಿರೇಕಲ್ಮಠದಿಂದ ಮೆರವಣಿಗೆಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ದೇವನಾಯ್ಕನಹಳ್ಳಿ ಟಿ.ಬಿ. ವೃತ್ತಕ್ಕೆ ತಂದು, ಅಲ್ಲಿ ನಿರ್ಮಿಸಲಾಗಿರುವ ಕಟ್ಟೆಯ ಮೇಲೆ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಹಿರಿಯ ಮುಖಂಡ ಬಿ.ಸಿದ್ದಪ್ಪ, ಹೆಚ್.ಎ.ಉಮಾಪತಿ, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷರೂ ಸಮಾಜದ ಮುಖಂಡ ಎಚ್.ಬಿ.ಶಿವಯೋಗಿ, ದಿಡಗೂರು ಪಾಲಾಕ್ಷಪ್ಪ, ತಾಲ್ಲೂಕು ಹಾಲುಮತ ಸಮಾಜದ ಅಧ್ಯಕ್ಷ ರಾಜು ಕಡಗಣ್ಣಾರ, ಇನ್‍ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾ ಮುಖಂಡ ರಂಜಿತ್, ಗಾಳಿ ನಾಗರಾಜ್, ಬೀರಪ್ಪ ಸೇರಿದಂತೆ ಕುರುಬ ಸಮಾಜದ ಹಲವಾರು ಮುಖಂಡರು, ಯುವಕರು ಇದ್ದರು.