ಬರಪೀಡಿತ ತಾಲ್ಲೂಕು ಪಟ್ಟಿಗೆ ನ್ಯಾಮತಿ ಸೇರ್ಪಡೆಗೆ ಯತ್ನ : ಶಾಂತನಗೌಡ

ಬರಪೀಡಿತ ತಾಲ್ಲೂಕು ಪಟ್ಟಿಗೆ ನ್ಯಾಮತಿ ಸೇರ್ಪಡೆಗೆ ಯತ್ನ : ಶಾಂತನಗೌಡ

ಹೊನ್ನಾಳಿ, ಆ.28- ಹೊನ್ನಾಳಿ, ಹರಿಹರ ಮತ್ತು ಜಗಳೂರು ತಾಲ್ಲೂಕುಗಳನ್ನು ಸರ್ಕಾರ ಈಗಾಗಲೇ ಬರ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಿದ್ದು, ಶೀಘ್ರದಲ್ಲಿಯೇ ನ್ಯಾಮತಿ ತಾಲ್ಲೂಕನ್ನು ಬರ ಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. ಸೋಮವಾರ ತಾಲ್ಲೂಕಿನ ಅರಬಗಟ್ಟೆ ಹೋಬಳಿ ವ್ಯಾಪ್ತಿಯ ಅರಬಗಟ್ಟೆ, ಸುಂಕದಕಟ್ಟೆ, ಕಡದಕಟ್ಟೆ, ಮಾದನಬಾವಿ ಗ್ರಾಮಗಳು ಸೇರಿದಂತೆ ಇತರೆ ಗ್ರಾಮಗಳ ಜಮೀನುಗಳಲ್ಲಿ ಬೆಳೆದು ಒಣಗಿರುವ ಮೆಕ್ಕೆಜೋಳ, ಶೇಂಗಾ, ಹತ್ತಿ, ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೊನ್ನಾಳಿ ತಾಲ್ಲೂಕಿನಲ್ಲಿ ಎಲ್ಲಾ ಬೆಳೆಗಳು ನೂರಕ್ಕೆ ನೂರರಷ್ಟು ಸಂಪೂರ್ಣ ಒಣಗಿ ಹೋಗಿದ್ದು, ದನಕರುಗಳಿಗೆ ಮೇವು ಕೂಡಾ ಲಭ್ಯ ವಾಗದ ಸ್ಥಿತಿಯಲ್ಲಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದರು.

ಹತ್ತು ದಿನಗಳ ಹಿಂದೆ ಅವಳಿ ತಾಲ್ಲೂಕಿನ ಎಲ್ಲಾ ಬೆಳೆಗಳು ಹಚ್ಚ ಹಸಿರಾಗಿ ನಳನಳಿಸುತ್ತಿದ್ದವು. ಒಂದು ವಾರದ ಹಿಂದೆ ಮಳೆಯಾಗಿದ್ದರೆ ಬಹುತೇಕ ಬೆಳೆಗಳು ಉತ್ತಮವಾಗಿರುತ್ತಿದ್ದವು. ಮಳೆ ಇಲ್ಲದೆ ಹಾಗೂ ಬಿಸಿಲಿನ ತಾಪದಿಂದ ಭೂಮಿ ಮೇಲೆ ಬಂದಿದ್ದ ಬೆಳೆಗಳೆಲ್ಲ ಈಗ ಸಂಪೂರ್ಣ ಒಣಗಿ ನಿಂತಿದ್ದು, ಸೂಕ್ತ ಪರಿಹಾರಕ್ಕೆ ಶ್ರಮಿಸುವುದಾಗಿ ತಿಳಿಸಿದರು. ನ್ಯಾಮತಿ ತಹಶೀಲ್ದಾರ್ ಆರ್.ವಿ.ಕಟ್ಟಿ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮ, ತಾಪಂ ಇಒ ಕರಿಬಸಪ್ಪ, ಕೃಷಿ ಅಧಿಕಾರಿ ಅಶ್ವಿನಿ ಹಾಗೂ ರೈತರು ಇದ್ದರು.

error: Content is protected !!