ಸ್ವರತಿ, ಸುಳ್ಳು ಹೇಳುವ ಪ್ರಧಾನಿ ಮೋದಿ

ಸ್ವರತಿ, ಸುಳ್ಳು ಹೇಳುವ ಪ್ರಧಾನಿ ಮೋದಿ

ಮೋದಿ ವಿರುದ್ಧ ಕಿಡಿಕಾರಿದ ಸಾಹಿತಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯ್ಕ್‌

ದಾವಣಗೆರೆ, ಆ. 26 – ಸ್ವರತಿಯ, ತನ್ನ ಬಣ್ಣಿಸಿಕೊಳ್ಳುವ ಹಾಗೂ ಸುಳ್ಳು ಹೇಳುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಂದು ಮಾಜಿ ಸಚಿವೆ ಹಾಗೂ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್ ಕಿಡಿ ಕಾರಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇತ್ತೀಚೆಗೆ ನಡೆದ ಚಂದ್ರಯಾನ – 3 ಯೋಜನೆ ಜನರ ಹಣದಿಂದ ಹಾಗೂ ವಿಜ್ಞಾನಿಗಳ ಪರಿಶ್ರಮದಿಂದ ನೆರವೇರಿದೆ. ಆದರೆ, ಪ್ರಧಾನ ಮಂತ್ರಿ ಈ ಸಂದರ್ಭದಲ್ಲಿ ನಾನೇ ಮಾಡಿದೆ ಎಂಬ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿ ದರು. ಇಂತಹ ಸಾಧನೆಯ ಸಂದರ್ಭದಲ್ಲಿ ಪ್ರಧಾನಿ ಉಪಸ್ಥಿತರಿದ್ದು ಹೆಮ್ಮೆ ಪಡಬೇಕು. ಆದರೆ, ತಾವೇ ಸಾಧನೆ ಮಾಡಿರುವಂತೆ ತೋರಿಸಿಕೊಳ್ಳುವುದು ನಾಚಿಕೆಯ ಸಂಗತಿ ಎಂದು ಅವರಿಗೆ ಹೇಳಬೇಕಿದೆ ಎಂದು ಲಲಿತಾ ನಾಯ್ಕ್ ಹೇಳಿದರು.

ಸಂಸತ್ ಭವನ ಉದ್ಘಾಟನೆಯಾದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡಿರಲಿಲ್ಲ. ಅವರು ವಿಧವೆ, ಕಪ್ಪು ಬಣ್ಣದವರು, ದಲಿತ – ಬುಡಕಟ್ಟು ಮಹಿಳೆ ಎಂಬುದೇ ಇದಕ್ಕೆ ಕಾರಣ ಎಂದು ಮಾಜಿ ಸಚಿವೆ ಆರೋಪಿಸಿದರು.

ಪ್ರಧಾನಿ ಮೋದಿ ಸಹ ಉದ್ಘಾಟನೆಗೆ ಒಬ್ಬರೇ ಹೋಗಿದ್ದರು. ಅವರ ಮಡದಿ ಎಲ್ಲೋ ಇದ್ದಾರೆ. ಅವರಿಗೂ ಉದ್ಘಾಟನೆಯ ವೇಳೆ ಅವಕಾಶವಿಲ್ಲ ಎಂದು ಆಕ್ಷೇಪಿಸಿದರು.

ಮಾಗನೂರು ಬಸಪ್ಪ ಅವರು ಕಾಯಕ ಯೋಗಿಗಳಾಗಿದ್ದರು. ಅವರು ನೂರು – ಸಾವಿರ ಮೋದಿಗೆ ಸಮ ಎಂದು ಲಲಿತಾ ನಾಯ್ಕ್ ಬಣ್ಣಿಸಿದರು.

ದೇವಾಲಯಗಳಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ಕಲ್ಲಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವವರು ಮನೆಯಲ್ಲಿ ಜನರ ಸಾವು ಸಂಭವಿಸಿದಾಗ ಅದೇ ಕೆಲಸ ಮಾಡಿ ಜೀವ ಉಳಿಸಬಹುದಲ್ಲವೇ? ಎಂದು ಪ್ರಶ್ನಿಸಿದರು.

ಈ ಪ್ರಶ್ನೆ ಕೇಳಿದರೆ ನನ್ನ ಹಿಂದೂ ಧರ್ಮ ದ್ರೋಹಿ ಎನ್ನುತ್ತಾರೆ. ಕೊಲೆ ಬೆದರಿಕೆ ಹಾಕುತ್ತಾರೆ. ಕೊಲೆ ಮಾಡಿದರೂ ನಮ್ಮಂತಹ ಸಾವಿರ ಜನ ಹುಟ್ಟಿಕೊಳ್ಳುತ್ತಾರೆ. ನಾವು ಇರುವವರೆಗೂ ಈ ಮಾತುಗಳನ್ನು ಹೇಳುತ್ತಲೇ ಇರುತ್ತವೆ. ಬಸವಣ್ಣನವರೂ ಸಹ ಸಮಾಜ ತಿದ್ದಲು ಇಂತಹ ಮಾತುಗಳನ್ನು ಹೇಳುತ್ತಲೇ ಇದ್ದರು ಎಂದು ಲಲಿತಾ ನಾಯ್ಕ್ ಹೇಳಿದರು.

error: Content is protected !!