ಹೊಳೆಸಿರಿಗೆರೆ : ಗುರುವಂದನೆ-ಗುರು ಸ್ಮರಣೆ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ್ ಅಭಿಮತ
ಮಲೇಬೆನ್ನೂರು, ಆ.27- ಶ್ರೇಷ್ಠ ಗುರುಗಳು (ಶಿಕ್ಷಕರು) ತಮ್ಮ ಜೀವನ ಪೂರ್ತಿ ಸಮಯವನ್ನು ತಮ್ಮ ಶಿಷ್ಯರ ಬದುಕನ್ನು ಶ್ರೇಷ್ಠಗೊಳಿಸಲು ಧಾರೆ ಎರೆಯುತ್ತಾರೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದು ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ್ ಅಭಿಪ್ರಾಯಪಟ್ಟರು.
ಹೊಳೆಸಿರಿಗೆರೆ ಗ್ರಾಮದ ಕಲ್ಲೇಶ್ವರ ಸಮುದಾಯ ಭವನದಲ್ಲಿ ಶ್ರೀ ಮಾಗೋಡ ಹಾಲಪ್ಪ ಪ್ರೌಢಶಾಲೆಯ 1981-82 ನೇ ಸಾಲಿನಿಂದ 1987-88 ನೇ ಸಾಲಿನವರೆಗಿನ ವಿದ್ಯಾ ರ್ಥಿಗಳು ಇಂದು ಹಮ್ಮಿಕೊಂಡಿದ್ದ ಗುರುವಂದನೆ-ಗುರುಸ್ಮರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
`ಯಾರು ಇತರರಿಗೆ ಬದುಕುತ್ತಾರೋ ಅವರು ಮಾತ್ರ ಬದುಕಿದಂತೆ, ಉಳಿದವರು ಬದುಕಿಯೂ ಸತ್ತಂತೆ’ ಎಂಬ ಸ್ವಾಮಿ ವಿವೇಕಾನಂದರ ಮಾತು ಈ ಕಾರ್ಯಕ್ರಮ ಅನ್ವಯಿಸುತ್ತದೆ. ನಿಮಗೆ ಶಿಕ್ಷಣ-ಸಂಸ್ಕಾರ ಕಲಿಸಿದ ಗುರುಗಳನ್ನು ಹುಡುಕಿ ಕರೆದುಕೊಂಡು ಬಂದು ಅವರಿಗಾಗಿ ಈ ಕಾರ್ಯಕ್ರಮ ಏರ್ಪಡಿಸಿ ಅವರಿಗೆ ಸನ್ಮಾನಿಸುವ ಮತ್ತು ಸ್ಮರಣೆ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುತ್ತಿರುವ ನೀವೇ ಶ್ರೇಷ್ಠರು ಎಂದು ಹಳೆಯ ವಿದ್ಯಾರ್ಥಿಗಳನ್ನು ಸ್ವಾಮೀಜಿ ಪ್ರಶಂಸಿಸಿದರು.
ಎಲ್ಲಾ ಭಾಗ್ಯಗಳಿಗಿಂತ ಶಿಕ್ಷಕನಾಗುವ ಅಥವಾ ಗುರುಗಳಾಗುವ ಭಾಗ್ಯ ಅತ್ಯಂತ ಶ್ರೇಷ್ಠವಾದದ್ದು, ಅಂತಹ ಶ್ರೇಷ್ಟತೆಯನ್ನು ಶಿಷ್ಯರಿಗೆ ನೀಡುವ ಪ್ರಾಮಾಣಿಕ ಸೇವೆಯನ್ನು ಇಂದಿನ ಶಿಕ್ಷಕರು ಸಲ್ಲಿಸಬೇಕೆಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿರುವ ನಮ್ಮ ಭರತ ಭೂಮಿಯಲ್ಲಿ ಗುರು ಪರಂಪರೆಗೆ ತನ್ನದೇ ಆದ ಶಕ್ತಿ ಹೊಂದಿದೆ ಎಂಬುದಕ್ಕೆ ಈ ಅಪರೂಪದ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.
ಋಷಿಗಳು, ಶರಣರು, ಸಂತರಿಂದಾಗಿ ನಮ್ಮ ದೇಶ ತನ್ನ ಶ್ರೇಷ್ಠತೆಯನ್ನು ಹೆಚ್ಚಿಸಿಕೊಂಡು ಬಂದಿದೆ. ಜನ್ಮ ಕೊಟ್ಟ ತಂದೆ-ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸುವುದು ಕೂಡಾ ಬದುಕಿನ ಸಾರ್ಥಕತೆಯನ್ನು ಸಾಬೀತು ಪಡಿಸುತ್ತದೆ ಎಂದು ಹೇಳಿದರು. ನಮ್ಮ ದೇಶದ ಉಸಿರು ಶಿಕ್ಷಕರಾಗಿದ್ದು, ಅಂತಹ ಶಿಕ್ಷಕರ ಬದುಕಿನ ಶ್ರೇಷ್ಠತೆಯನ್ನು ಸ್ಮರಿಸುವ ಮೂಲಕ ಹೊಳೆ ಸಿರಿಗೆರೆಯ ಈ ಹಳೆಯ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ ಎಂದರು.
ದಾವಣಗೆರೆಯ ಕನ್ನಡ ಶಿಕ್ಷಕಿ ಎಂ.ಬಿ. ತೇಜಸ್ವಿನಿ ಅವರು `ಗುರು ಪರಂಪರೆಯ ಮಹತ್ವ’ ಕುರಿತು ಉಪನ್ಯಾಸ ನೀಡಿ ಗುರು ಪರಂಪರೆಯಲ್ಲಿ ಶಿಕ್ಷಕರ ಕೂಡಾ ಗುರುವಾಗಿರುವ ಸಾಕಷ್ಟು ಉದಾಹರಣೆಗಳನ್ನು ನೀಡಿದರು. ಗ್ರಾಮದ ಹಿರಿಯ ಮುತ್ಸದ್ಧಿ ಎನ್.ಜಿ. ನಾಗನಗೌಡ್ರು ಮಾತನಾಡಿದರು.
ಶಿಷ್ಯರಿಂದ ಗೌರವ ಸ್ವೀಕರಿಸಿದ ನಿವೃತ್ತ ಶಿಕ್ಷಕರಾದ ಎಂ. ಗದಿಗೆಪ್ಪಯ್ಯ ಎಂ.ಬಿ. ನಾರಜ್ಜಿ, ಎಂ.ವಿ. ರಟ್ಟೀಹಳ್ಳಿ, ಬಿ. ಸಣ್ಣವೀರಪ್ಪ, ಬಿ.ಎಂ. ಕರಬಸಪ್ಳನವರ, ಎಸ್. ಹನುಮಂತಪ್ಪ, ಕೆ. ಮೂರ್ತಿ, ಜಿ.ಕೆ. ಕುಬೇರಪ್ಪ, ಹೆಚ್.ಎಸ್. ರಂಗಪ್ಪ ಮತ್ತು ಹೆಚ್.ಕೆ. ಕೊರಡೂರು ಅವರುಗಳು ಮಾತನಾಡಿ, ನಮ್ಮ ಶಿಷ್ಯರ ಪ್ರಗತಿ-ಸಾಧನೆಯೇ ನಮಗೆ ಸಿಕ್ಕ ಉಡುಗೊರೆ ಆಗಿದೆ ಎಂದರು.
ದಿವಂಗತ ಶಿಕ್ಷಕರಾದ ಎಂ.ಎಂ. ಶಿವಾನಂದಯ್ಯ, ಯು.ಎಂ. ಮತ್ತಿಹಳ್ಳಿ, ಟಿ.ಇ. ಧನಂಜಯಪ್ಪ, ಸಿ.ಎಲ್. ಬಸವರಾಜ್, ಜೆ.ಎಸ್. ಲಮಾಣಿ ಮತ್ತು ಹೆಚ್.ಸಿ. ಪಾಲಾಕ್ಷಯ್ಯ ಅವರನ್ನೂ ಈ ಸಂದರ್ಭದಲ್ಲಿ ಸ್ಮರಣೆ ಮಾಡಿ ಅವರ ಕುಟುಂಬದವರನ್ನು ಗೌರವಿಸಿದ್ದು ವಿಶೇಷವಾಗಿತ್ತು. ಶ್ರೀ ಮಾಗೋಡ ಹಾಲಪ್ಪ ಪ್ರೌಢಶಾಲೆಯ ಸಲಹಾ ಸಮಿತಿ ಅಧ್ಯಕ್ಷ ಮಾಗೋಡ ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮದ ಹಿರಿಯರಾದ ಕೆ. ಮಲ್ಲಪ್ಪ, ರಾಷ್ಟ್ರ ಪ್ರಶಸ್ತಿ ಶಿಕ್ಷಕ ಎನ್.ಹುಚ್ಚಪ್ಪ ಮಾಸ್ತರ್ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿ ಎಂ. ಗೌರಿ ಅವರ ಭರತನಾಟ್ಯ ಎಲ್ಲರ ಗಮನ ಸೆಳೆಯಿತು. ಶ್ರೀಮತಿ ಮಮತಾ ಕುಸುಗೂರು ಪ್ರಾರ್ಥಿಸಿದರು. ಎಲ್ಐಸಿ ಏಜೆಂಟ್ ಕೆ. ಮಹಾಂತೇಶ್ ಸ್ವಾಗತಿಸಿದರು. ಶಿಕ್ಷಕ ಲೋಕಣ್ಣ ಮಾಗೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಲಿಂಗೈಕ್ಯ ಶಿಕ್ಷಕರ ಕುರಿತು ಮಾತನಾಡಿದರು. ಉಪನ್ಯಾಸಕ ಎಂ. ಪ್ರಸನ್ನ ವಂದಿಸಿದರು.