ದಾವಣಗೆರೆ, ಆ. 27 – ಭಾರತದ ಸ್ವಾತಂತ್ರ್ಯ ಹೋರಾಟಗಾರ, ಭಾರತ ಸೇವಾದಳ ಸಂಸ್ಥಾಪಕ ದಿವಂಗತ ಪದ್ಮ ಭೂಷಣ ಡಾ. ನಾ. ಸು. ಹರ್ಡೇಕರ್ ರವರ 48 ನೇ ಪುಣ್ಯ ಸ್ಮರಣೆಯನ್ನು ಇಂದು ಭಾರತ ಸೇವಾದಳ ಭವನದಲ್ಲಿ ಆಚರಿಸಲಾಯಿತು.
ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಪ್ರೊ. ಚನ್ನಪ್ಪ ಪಲ್ಲಾಗಟ್ಟೆ ಹರಡೀಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಡಾ. ನಾರಾಯಣ ಸುಬ್ಬರಾವ್ ಹರ್ಡೇಕರ್ ಕಡು ಬಡತನದಲ್ಲಿ ಹುಟ್ಟಿ ವಿದೇಶದಲ್ಲಿ ವೈದ್ಯಕೀಯ ಶಾಸ್ತ್ರವನ್ನು ಅಭ್ಯಾಸ ಮಾಡಿ, ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂಸ್ತಾನಿ ಸೇವಾದಳವನ್ನು ಕಟ್ಟಿ ಯುವಕರಿಗೆ ಶಿಸ್ತಿನ ಬಗ್ಗೆ, ದೇಶಭಕ್ತಿಯ ಬಗ್ಗೆ ತರಬೇತಿಯನ್ನು ನೀಡಿ ಸ್ವಾತಂತ್ರ್ಯವನ್ನು ತಂದುಕೊಡಲು ತುಂಬಾ ಶ್ರಮವಹಿಸಿದರು. ದೀನದಲಿತರಿಗೆ ಆಸ್ಪತ್ರೆಗಳನ್ನು ಸ್ಥಾಪಿಸಿ ಅವರಿಗೆ ಆರೋಗ್ಯ ಚಿಕಿತ್ಸೆಯನ್ನು ನೀಡಿದರು ಎಂದು ತಿಳಿಸಿದರು. ಅವರ ಜೀವನ ಆದರ್ಶಮಯವಾಗಿದ್ದು ಯುವಕರು ಸ್ವಾರ್ಥಕ್ಕಾಗಿ ಬದುಕದೇ ದೇಶಕ್ಕಾಗಿ ಬದುಕಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ಹಾಸಬಾವಿ ಕರಿಬಸಪ್ಪ ಮತ್ತು ಇತರರು ಉಪಸ್ಥಿತರಿದ್ದರು. ವಲಯ ಸಂಘಟಕ ಅಣ್ಣಪ್ಪ ಸ್ವಾಗತಿಸಿದರು.