ದಾವಣಗೆರೆ, ಆ. 27 – ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರವು ಸ್ಥಳೀಯ ಜಾಲಿನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಮೊನ್ನೆ ನಡೆಯಿತು.
ಹಿರಿಯ ವೈದ್ಯ ಡಾ. ಟಿ.ಜಿ. ರವಿ ಕುಮಾರ್ ನೇತೃತ್ವದ ವೈದ್ಯಕೀಯ ತಂಡದಿಂದ ಸಲಹೆ, ಚಿಕಿತ್ಸೆ ಪಡೆದರು.
ಜಾಲಿನಗರದ ನಿವಾಸಿಗಳ ಪರವಾಗಿ ಮಾತನಾಡಿದ ವೆಂಕಟೇಶ್, ಈ ಶಿಬಿರದಿಂದ ನಮ್ಮ ದೇಹಾರೋಗ್ಯದ ಸ್ಥಿತಿಗತಿ ಬಗ್ಗೆ ಅರಿವಾಗಿದೆ. ಇದಕ್ಕೆಲ್ಲ ಕಾರಣರಾದ ಪ್ರೀತಿ ಆರೈಕೆ ಟ್ರಸ್ಟ್ ಸಿಬ್ಬಂದಿಗೆ ಬಡಾವಣೆಯ ಪರವಾಗಿ ಧನ್ಯವಾದ ತಿಳಿಸುತ್ತೇವೆ ಎಂದರು.
ಕಾರ್ಯದರ್ಶಿ ಡಾ. ಟಿ.ಜಿ. ರವಿಕುಮಾರ್ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ನಮಗೆಲ್ಲ ಗೊತ್ತಾಗಿದೆ. ಆದರೆ, ಒತ್ತಡದ ಬದುಕಿನಲ್ಲಿ ಎಷ್ಟೋ ಬಾರಿ ಸಣ್ಣಪುಟ್ಟ ಏರುಪೇರುಗಳನ್ನು ಮರೆತು ಬಿಡುತ್ತೇವೆ. ಇವುಗಳಿಂದಲೇ ಹೆಚ್ಚಿನ ಆಪತ್ತು ಬರುವ ಸಂಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಆರೋಗ್ಯ ಶಿಬಿರ ಆಯೋಜನೆ ಮಾಡುತ್ತಿದ್ದೇವೆ. ದೇಶ ವಾಸಿಗಳ ಆರೋಗ್ಯವು ದೇಶದ ಅಭಿವೃದ್ಧಿಗೆ ಪೂರಕವಾಗಲಿ ಎಂಬ ಸದಾಶಯ ನಮ್ಮದಾಗಿದೆ ಎಂದು ಹೇಳಿದರು.
ಮೇಯರ್ ವಿನಾಯಕ್ ಪೈಲ್ವಾನ್ ಮತ್ತು ಪಾಲಿಕೆ ಸದಸ್ಯ ಶ್ರೀ ಗಾಯತ್ರಿ ಬಾಯಿ ಮಾತನಾಡಿದರು. ಶಿಬಿರದಲ್ಲಿ ಮಾಜಿ ಶಾಸಕ ಗುರುಸಿದ್ದಗೌಡ್ರು, ಉದ್ಯಮಿಗಳಾದ ನಾಗರಾಜಸ್ವಾಮಿ, ಟ್ರಸ್ಟ್ ಸಿಬ್ಬಂದಿಗಳಾದ ನುಂಕೇಶ್, ಶ್ವೇತಾ, ವಿಜಯ್ ಕುಮಾರ್, ಅಭಿಜಿತ್ ಸೇರಿದಂತೆ ಹಲವರು ಭಾಗವಹಿಸಿದ್ದರು.