`ಬದ್ಧತೆ ಇರುವವ ಮಾತ್ರ ಬದುಕಿನಲ್ಲಿ ಗೆಲ್ಲುತ್ತಾನೆ’

`ಬದ್ಧತೆ ಇರುವವ ಮಾತ್ರ ಬದುಕಿನಲ್ಲಿ ಗೆಲ್ಲುತ್ತಾನೆ’

ಮುಂಬೈ, ಆ.25-  ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಯವರು  ಕಾಲ, ಕಾಸು, ಕಾಯಕವನ್ನು ಎಂದೂ  ವ್ಯರ್ಥ ಮಾಡಿದವರಲ್ಲ. ಅದೇ ಪರಂಪರೆಯನ್ನು ತಾವು ಮುಂದುವರೆಸಿಕೊಂಡು ಬಂದಿರುವುದಾಗಿ  ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಡೊಂಬವಲಿಯಲ್ಲಿ ನಡೆದ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ವಚನ ಸಂಸ್ಕೃತಿ ಅಭಿಯಾನದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಇದೊಂದು ಅಪರೂಪದ ಸಾಂಸ್ಕೃತಿಕ ಅಭಿಯಾನ. ಇಡೀ ಭಾರತದಲ್ಲಿ ಈ ರೀತಿಯ ಸಂಚಲನ ಇದುವರೆಗೂ ನಡೆದಿಲ್ಲ. ಈ ಕಾರ್ಯದ ಹಿಂದೆ ಎಷ್ಟೆಲ್ಲಾ ಕಷ್ಟ ಇದೆ ಅಂತ ಇಲ್ಲಿರುವಂತಹ  ಕೆಲವರಿಗಾದರೂ ಗೊತ್ತಿದೆ. ನಾವು ಇದ್ದ ವಿಚಾರಗಳನ್ನು ನೇರವಾಗಿ ಹೇಳುವುದನ್ನು ಮೈಗೂಡಿಸಿಕೊಂಡಿದ್ದೇವೆ. ಯಾರೋ ಸಿಟ್ಟು, ಬೇಸರ ಆಗ್ತಾರೆ ಅಂತ್ಹೇಳಿ ಸತ್ಯವನ್ನು ಮರೆಮಾಚುವ ಅಗತ್ಯವಿಲ್ಲ. ಶರಣರ ವಚನಗಳನ್ನು ಎಷ್ಟೇ ಕಷ್ಟವಾದರೂ ಅದರ ಪರಿಶ್ರಮವನ್ನು ನಾವು ಅನುಭವಿಸಿ ಸಮಾಜಕ್ಕೆ ನಲಿವನ್ನು ನೀಡಬೇಕೆಂಬ ಧ್ಯೇಯವನ್ನು ನಮ್ಮ ಕಣ್ಮುಂದೆ ಇಟ್ಟುಕೊಂಡಿದ್ದೇವೆ ಎಂದು ನುಡಿದರು.

ನಮ್ಮ ಕಲಾವಿದರು ಆರೋಗ್ಯವನ್ನೂ ಲೆಕ್ಕಿಸದೇ ಏನೂ ನಡೆದಿಲ್ಲವೇನೋ ಎನ್ನುವ ಹಾಗೆ ಅವರು ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡುತ್ತಾರೆ. ಅದೊಂದು ಬದುಕಿಗೆ ಬದ್ಧತೆ. ನಾವು ಯಾವುದಾದರೊಂದು ಕೆಲಸಕ್ಕೆ ಒಪ್ಪಿಕೊಂಡಿದ್ದೇವೆ ಎಂದರೆ ಆ ಬದ್ಧತೆಗೆ ತಕ್ಕ ಹಾಗೆ ನಡೆದುಕೊಳ್ಳಬೇಕು. ಬದ್ಧತೆಯಿಲ್ಲದ ಬದುಕನ್ನು ನಡೆಸುವವರು ಬದುಕಿನಲ್ಲಿ ಸೋಲುತ್ತಾರೆ. ಯಾರಿಗೆ ಬದ್ಧತೆ ಇರುತ್ತೋ ಅವರು ಬದುಕಿನಲ್ಲಿ ಗೆಲ್ಲುತ್ತಾರೆ. ಹಾಗಾಗಿ ನಮ್ಮ ಕಲಾವಿದರು ಬದುಕಿನಲ್ಲಿ ಗೆದ್ದಿದ್ದಾರೆ ಅಂತ ಭಾವಿಸಿದ್ದೇವೆ. ಈ ಅಭಿಯಾನ ಅನುಭವ, ಅನುಭಾವ ಗೋಷ್ಠಿ ಇದ್ದ ಹಾಗೆ. ಶರಣರು ಏನೇ ಹೇಳಿದರೂ ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಪರಸ್ಪರ ಸಂವಾದ ಮಾಡುವುದರ ಮೂಲಕ ಹೊಸ ಬೆಳಕನ್ನು ಸಮಾಜಕ್ಕೆ ಕೊಡುತ್ತಿದ್ದರು. ಆ ಬೆಳಕನ್ನು ನಾವು ನೀವೂ ಸೇರಿ ಪಡೆಯಬೇಕು ಎನ್ನುವಂಥದ್ದು ನಮ್ಮ ಅಭಿಲಾಷೆ ಎಂದರು. 

 ಸಮಾರಂಭದ ಅಧ್ಯಕ್ಷತೆಯನ್ನು ಆರ್.ಬಿ.ಹೆಬ್ಬಳ್ಳಿ ವಹಿಸಿದ್ದರು. ಹೋಟೆಲ್ ಉದ್ಯಮಿ ಭಾಸ್ಕರ ಶೆಟ್ಟಿ, ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ ಎನ್. ಶೆಟ್ಟಿ, `ಅನಂತ ಹಲವಾಯಿ’ ಖ್ಯಾತಿಯ ರಾಜು ಗವಳಿ, ಹಿರಿಯ ಪತ್ರಕರ್ತ ವಸಂತ ಕಲಕೋಟಿ ಹಾಗೂ ಬಸವ ಸೇವಾ ಮಂಡಳ ಡೊಂಬಿವಲಿ ಕಾರ್ಯಾಧ್ಯಕ್ಷ ಬಸಲಿಂಗಪ್ಪ ಸೊಡ್ಡಗಿ   ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗುರುರಾಜ ಪೋತನೀಸ ಕಾರ್ಯಕ್ರಮ ನಿರೂಪಿಸಿದರು.

error: Content is protected !!