ಸಾಮಾಜಿಕವಾಗಿ ಸಂವಿಧಾನ ಸಮರ್ಪಕ ಬಳಕೆಯಾಗಿಲ್ಲ

ಸಾಮಾಜಿಕವಾಗಿ ಸಂವಿಧಾನ ಸಮರ್ಪಕ ಬಳಕೆಯಾಗಿಲ್ಲ

ಹರಿಹರದ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್‌

ಹರಿಹರ, ಅ. 25 – ಸಂವಿಧಾನವನ್ನು ರಾಜಕೀಯವಾಗಿ ಮಾತ್ರ ಬಳಕೆ ಮಾಡಿಕೊಂಡಿದ್ದೇವೆ. ಸಾಮಾಜಿಕ, ಆರ್ಥಿಕ ಹಾಗೂ ಔದ್ಯೋಗಿಕವಾಗಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು  ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.

ನಗರದ ಪ್ರೊ ಬಿ. ಕೃಷ್ಣಪ್ಪ ಭವನದ ಮೈತ್ರಿವನ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ  ರಾಜ್ಯ ಸಮಿತಿ(ಅಂಬೇಡ್ಕರ್ ವಾದ) ಇವರ ವತಿಯಿಂದ ನಡೆದ `ದಲಿತ ಚಳವಳಿ ಅಂದು,  ಇಂದು, ಮುಂದು’ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತಿಯಾದ ಜಾತಿ ವ್ಯವಸ್ಥೆಯಿಂದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಅಸಮಾನತೆಗಳು ಹೆಚ್ಚಾಗುತ್ತಿವೆ. ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ತಿಳಿವಳಿಕೆ ಇದೆ. ಅಸಮಾನತೆ ನಿವಾರಣೆ ಸಂವಿಧಾನ ದಿಂದ ಮಾತ್ರ ಸಾಧ್ಯ ಎಂದವರು ಹೇಳಿದರು.

ಬ್ರಿಟಿಷರ ವಿರುದ್ಧದ ಹೋರಾಟ ಕೇವಲ ರಾಜಕೀಯ ಉದ್ದೇಶದ್ದಲ್ಲ. ಅದು ಆರ್ಥಿಕ ಹಾಗೂ ಸಾಮಾಜಿಕ ಹೋರಾಟವೂ ಆಗಿತ್ತು. ಅಸ್ಪೃಶ್ಯತೆ ನಿವಾರಣೆ, ಸತಿ ಸಹಗಮನ ಪದ್ಧತಿ, ದೇವದಾಸಿ ಪದ್ಧತಿಗಳ ವಿರುದ್ಧ  ಸಾಮಾಜಿಕ ಹೋರಾಟ ನಡೆದಿತ್ತು ಎಂದು ನ್ಯಾಯಮೂರ್ತಿ ನಾಗಮೋಹನ ದಾಸ್ ತಿಳಿಸಿದರು.

ಭಾರತದ ಸಾಧನೆಗೆ ಸಂವಿಧಾನ ಕಾರಣ. ನಿನ್ನೆ ನಡೆದ ಬಾಹ್ಯಾಕಾಶ ಸಾಧನೆಗೆ ಸಂವಿಧಾನ ಕಾರಣ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಹಲವಾರು ಹುದ್ದೆಗಳಲ್ಲಿ ಕೆಳ ವರ್ಗದ ಜನರು ಅಧಿಕಾರಕ್ಕೆ ಬರಲು ಸಂವಿಧಾನ ಕಾರಣ ಎಂದು ಹೇಳಿದರು.

ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಘಟನೆಗಳು ಹರಿದು ಹಂಚಿಕೆಯಾ ಗಿವೆ. ಬಲಿಷ್ಠ, ಸದೃಢ ಹಾಗೂ ಜಾತ್ಯತೀಯ ಭಾರತ ಕಟ್ಟಲು ಸಂಘಗಳು ಜೊತೆಯಾಗಬೇಕಿದೆ ಎಂದರು.

ಬಾಹ್ಯಾಕಾಶದ ಸಾಧನೆ ಜೊತೆಗೆ, ನಮ್ಮ ದೇಶದಲ್ಲಿ ಇರುವಂತ ಅಸ್ಪೃಶ್ಯತೆ ನಿವಾರಣೆ ಆಗಬೇಕು. ನಮ್ಮ ಊರು, ಕೇರಿ ಅಭಿವೃದ್ಧಿ ಕಂಡಾಗ ವಿಶ್ವಗುರು ಆಗಲು ಸಾಧ್ಯ ಎಂದು ಹೇಳಿದರು.

ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್  ಅಧ್ಯಕ್ಷತೆಯನ್ನು ವಹಿಸಿದ್ದರು.   

ಈ ಸಂದರ್ಭದಲ್ಲಿ ಕಾರ್ಯದರ್ಶಿ  ಡಾ. ಜಿ.ಎನ್. ಉಮೇಶ್, ಬಿ. ರಾಜಶೇಖರ ಮೂರ್ತಿ ಜನ ಪ್ರಕಾಶನ, ರುದ್ರಪ್ಪ ಹನಗವಾಡಿ, ಜಿಲ್ಲಾ ಸಂಚಾಲಕ ದುಗ್ಗಪ್ಪ,  ಮಂಜುನಾಥ್ ನಾಗನಾಳ, ನಾಗಪ್ಪ ಬಡಗೇರ್, ನಾಗರಾಜ್, ಹುಲಗೇಶ್, ಅಣ್ಣಯ್ಯ ಚಿಕ್ಕಮಗಳೂರು, ಜೀವೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!