ದಾವಣಗೆರೆ, ಆ. 22- ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿಗೆ ಜನಪದವೇ ತಾಯಿಬೇರು ಎಂದು ನಿವೃತ್ತ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಹೇಳಿದರು.
ನಗರದ ನೂತನ ಕಾಲೇಜಿನ ಆವರಣದಲ್ಲಿ ದವನ ಪದವಿ ಕಾಲೇಜು ಮತ್ತು ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರ ಸಂಯುಕ್ತಾಶ್ರಯದಲ್ಲಿ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಈ ನೆಲದ ಅನುಭವ ಸಾಹಿತ್ಯ. ನೋವು, ನಲಿವು ಎಲ್ಲವೂ ಮೇಳೈಸಿ, ಸಾಂಸ್ಕೃತಿಕ ಬದುಕನ್ನು ಹಸನು ಮಾಡಿವೆ. ನಮ್ಮ ಯುವ ಪೀಳಿಗೆ ಇಂದು ಧರ್ಮಾಂಧತೆಯ ಗುಂಗಿಗೆ ಒಳಗಾಗಿ ಪಾಶ್ಚಾತ್ಯ ಸಂಸ್ಕೃತಿಯ ಬಲಿಪಶುಗಳಾಗಿ ಜನಪದ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದರು.
ಇಡೀ ವಿಶ್ವದಲ್ಲಿಯೇ ಜನಪದಕ್ಕೆ ವಿಶ್ವವಿದ್ಯಾಲಯ ಇರುವುದು ಕರ್ನಾಟಕದಲ್ಲಿ ಮಾತ್ರ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಜನಪದ ಕಲೆ, ಸಾಹಿತ್ಯವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಸಂಘ-ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೂತನ ಕಾಲೇಜು ಅಧ್ಯಕ್ಷ ಎನ್. ಪರಶುರಾಮನಗೌಡ ಮಾತನಾಡಿ, `ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’. ಇಂದಿನ ಕಾರ್ಯಕ್ರಮ ನಮ್ಮ ಯುವಕರಲ್ಲಿ ಹೊಸ ಚೈತನ್ಯವನ್ನು ತಂದಿದೆ ಎಂದರು. ದವನ್ ಕಾಲೇಜು ಕಾರ್ಯದರ್ಶಿ ವೀರೇಶ್ ಪಟೇಲ್, ನೂತನ ಪದವಿ ಪೂರ್ವ ಕಾಲೇಜಿನ ಡೀನ್ ಪ್ರೊ. ಎಸ್. ಹಾಲಪ್ಪ, ದವನ್ ಕಾಲೇಜು ನಿರ್ದೇಶಕ ಹರ್ಷರಾಜ್ ಗುಜ್ಜರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಕೆ. ಕೊಟ್ರಪ್ಪ, ಬೋಧಕ, ಬೋಧಕೇತರರು ಉಪಸ್ಥಿತರಿದ್ದರು.
ಶರಧಿ ಪ್ರಾರ್ಥಿಸಿದರು. ದಿವ್ಯಾ ಸ್ವಾಗತಿಸಿದರು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಿ.ಕೆ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ವಂದಿಸಿದರು. ಎಸ್. ನಯನ ನಿರೂಪಿಸಿದರು.
ಕಾರ್ಯಕ್ರಮದ ನಂತರ ಜನಪದ ಗೀತೆ, ನಂದಿಕೋಲು, ಡೊಳ್ಳು ಕುಣಿತ, ಮಹಿಳಾ ವೀರಗಾಸೆ, ಲಂಬಾಣಿ ನೃತ್ಯ ಕಲೆಗಳ ಪ್ರದರ್ಶನ ನಡೆಯಿತು.