ಜಗಳೂರು : ಶಾಸಕ ಬಿ.ದೇವೇಂದ್ರಪ್ಪ ನಿರ್ದೇಶನ
ಜಗಳೂರು, ಆ.21- ಸರ್ಕಾರದ ಮಹತ್ತರ ಗ್ಯಾರಂಟಿ ಯೋಜನೆ ಅರ್ಹರಿಗೆ ತಲುಪಬೇಕು. ಗೃಹಲಕ್ಷ್ಮಿ ಯೋಜನೆಯನ್ನು ಯಶಸ್ವಿಯಾಗಿ ತಲುಪಿಸಲು ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತು ಗ್ರಾಮ ಪಂಚಾಯಿತಿ ನೋಡೆಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಆಗಸ್ಟ್ 30 ರಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆ ವಿಧ್ಯುಕ್ತ ಚಾಲನೆ ನೀಡಲಿದ್ದು, ಅಂದಿನ ದಿನ ಜಗಳೂರಿನಲ್ಲೂ ಚಾಲನೆ ಕಾರ್ಯಕ್ರಮ ಆಯೋಜಿಸಲಾಗುವುದು. ಅರ್ಹ ಫಲಾನುಭವಿಗಳಿಗೆ ಜಾಗೃತಿ ಮೂಡಿಸಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು.ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.
ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕ ಸಿದ್ದರಾಮ್ ಮಾರಿಹಾಳ್ ಮಾತನಾಡಿ, ಸ್ತ್ರೀಯರ ಸಬಲೀಕರಣದ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದೆ. ಸರ್ಕಾರ ನಿರ್ದೇಶನದಂತೆ ಮುಖ್ಯಮಂತ್ರಿಗಳ ಗೃಹಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮ 10×10 ಇಂಚಿನ ಎಲ್ಇಡಿ ನೇರಪ್ರಸಾರ ಗ್ರಾಮ ಪಂಚಾಯಿತಿ ವ್ಯಾಪ್ತಿ ಕನಿಷ್ಟ 2000 ಜನರಿಗೆ ತಲುಪಬೇಕು.
ತಾಲ್ಲೂಕಿನಲ್ಲಿ 42,968 ಪಡಿತರ ಚೀಟಿಗಳಲ್ಲಿ 36,902 ಶೇ. 86 ರಷ್ಟು ಅರ್ಜಿ ಸಲ್ಲಿಸಿದ್ದಾರೆ. ಎಪಿಎಲ್ ಫಲಾನುಭವಿಯೂ ಅರ್ಜಿ ಸಲ್ಲಿಸಬಹುದು. ಆದರೆ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಅಗತ್ಯ ದಾಖಲೆಗಳ ಬಗ್ಗೆ ಜನರಿಗೆ ತಿಳಿಸಬೇಕು. ಹೆಚ್ಚಿನ ಮಾಹಿತಿಗಾಗಿ 8147500500 ಗೆ ಎಸ್ ಎಂಎಸ್ ಮಾಡಿ ಅಥವಾ 1902 ಟೋಲ್ ಫ್ರೀಗೆ ಕಾಲ್ ಮಾಡಿ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ್ ಮಂಜಾನಂದ, ತಾ.ಪಂ ಇಓ ಚಂದ್ರಶೇಖರ್, ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಿಡಿಪಿಓ ಬಿರೇಂದ್ರಕುಮಾರ್ ಸೇರಿದಂತೆ, ಅಧಿಕಾರಿಗಳು ಉಪಸ್ಥಿತರಿದ್ದರು.