ರಾಜ್ಯದಲ್ಲಿ 262 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ

ರಾಜ್ಯದಲ್ಲಿ 262 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ

ಹೊನ್ನಾಳಿ, ಆ. 22-  ರಾಜ್ಯದ 48 ಸಾವಿರ ಶಾಲೆಗಳ ಪೈಕಿ ಕೇವಲ 262 ಶಾಲೆಗಳಲ್ಲಿ  ಮಾತ್ರ ಪೂರ್ವ ಪ್ರಾಥಮಿಕ ತರಗತಿಗಳನ್ನು ತೆರೆಯುವ ಮೂಲಕ  ಅವೈಜ್ಞಾನಿಕ ಕ್ರಮ ಕೈಗೊಂಡಿದ್ದು,  ಸರ್ಕಾರದ ಈ ಕ್ರಮವನ್ನು ರಾಜ್ಯ ಎಸ್‌.ಡಿ.ಎಂ.ಸಿ. ಸಮನ್ವಯ ವೇದಿಕೆ ಖಂಡಿಸುತ್ತದೆ ಎಂದು  ಕರ್ನಾಟಕ ರಾಜ್ಯ ಎಸ್‌.ಡಿ.ಎಂಸಿ. ಸಮನ್ವಯ ವೇದಿಕೆಯ ಅಧ್ಯಕ್ಷ  ಮೊಯಿದ್ದೀನ್  ಕುಟ್ಟಿ ಹೇಳಿದರು. 

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಕೇವಲ 262 ಪ್ರಾಥಮಿಕ ಶಾಲೆಗಳಲ್ಲಿ  ಮಾತ್ರ ಪೂರ್ವ ಪ್ರಾಥಮಿಕ ತರಗತಿಗಳನ್ನು ಜೋಡಣೆ ಮಾಡಿ ಮೂಗಿಗೆ ತುಪ್ಪ ಸವರುವ ಕೆಲಸಕ್ಕೆ ಮುಂದಾಗಿದೆ ಎಂದರು.

 ಅಲ್ಲದೆ ಗರಿಷ್ಠ  30 ಮಕ್ಕಳಿಗೆ  ಮಾತ್ರ ಅವಕಾಶವನ್ನು ನೀಡುವ ಮೂಲಕ ಮಕ್ಕಳಲ್ಲಿ ತಾರತಮ್ಯ ನೀತಿ ಅನುಸರಿಸುವುದರೊಂದಿಗೆ  ಸ್ಥಳೀಯವಾಗಿ  ಹೆಚ್ಚು ಮಕ್ಕಳು  ದಾಖಲಾತಿ ಹೊಂದಲು ಬಯಸಿದರೆ  ಸ್ಥಳೀಯ
ಪೋಷಕರು ಮತ್ತು ಶಿಕ್ಷಕರ ಮಧ್ಯೆ ಗೊಂದಲ ಉಂಟಾಗುವ ಸಾಧ್ಯತೆಗಳಿವೆ ಇಂತಹ ಒಂದು ನಿರ್ಧಾರದಿಂದ ಸರ್ಕಾರಿ  ಶಾಲೆ ಸಬಲೀಕರಣ ಆಗುವ ಬದಲಿಗೆ  ಇನ್ನಷ್ಟು ದುರ್ಬಲಗೊಳಿಸಲು ಸರ್ಕಾರ ಮುಂದಾಗಿದೆ  ಎಂದು  ಆರೋಪಿಸಿದರು. 

ಯಾವುದೇ ಒಂದು  ಯೋಜನೆಯನ್ನು  ಪ್ರಾರಂಭಿಸುವ  ಮೊದಲು  ಮೂಲ ವಿಷಯ ತಜ್ಞರೊಂದಿಗೆ ಚರ್ಚೆ ಮಾಡುವ ಸೌಜನ್ಯ ತೋರದೇ  ಅವೈಜ್ಞಾನಿಕವಾಗಿ  ಸುತ್ತೋಲೆಯನ್ನು  ಹೊರಡಿಸಿರುವುದು ಸರ್ಕಾರದ ಬೇಜವಾಬ್ದಾರಿ ತನವನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದರು. 

ಇನ್ನು ಈಗಿರುವ  ಅಂಗನವಾಡಿ ಕೇಂದ್ರಗಳು ಮತ್ತು ಅದರ ಕಾರ್ಯಕರ್ತೆಯರಿಗೆ ಪರ್ಯಾಯ  ವ್ಯವಸ್ಥೆ ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಇದರಿಂದ  ಶಿಕ್ಷಣ  ಇಲಾಖೆ ಹಾಗೂ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ನಡುವೆ ಸಮನ್ವಯ ಇಲ್ಲದೇ ಗೊಂದಲ ಮೂಡಿಸುವಂತಾಗುತ್ತದೆ ಎಂದು ಹೇಳಿದರು .

ಈಗಾಗಲೇ ಎಸ್‍ಡಿಎಂಸಿ.ಯವರು  ಸರ್ಕಾರಿ ಶಾಲೆಯಲ್ಲಿ  ಎಲ್.ಕೆ.ಜಿ.ಯನ್ನು ಪ್ರಾರಂಭಿಸಿ, ಅಲ್ಲಿನ ಶಿಕ್ಷಕಿಯರಿಗೆ ಸುಮಾರು ಹತ್ತು ಸಾವಿರ ಗೌರವ ಧನ ನೀಡಿರುವ ಉದಾಹರಣೆಗಳಿವೆ  ಎಂದರು. 

ಈಗಾಗಲೇ ಅಂಗನವಾಡಿ ಕೇಂದ್ರಗಳಲ್ಲಿ ವಯಸ್ಸಿಗನುಗುಣವಾಗಿ  ಹಲವಾರು ಪೂರಕ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಕಾರ್ಯಕ್ರಮಗಳು ಜಾರಿಯಲ್ಲಿ ಇದ್ದು , ಇದ್ಯಾವುದನ್ನು  ಪರಿಗಣನೆಗೆ ತೆಗದುಕೊಳ್ಳದೇ  ಆದೇಶದಲ್ಲಿ ಪೌಷ್ಟಿಕ ಆಹಾರ,  ಆರೋಗ್ಯ ಹಾಗೂ  ನೈಮರ್ಲ್ಯದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದೇ ಇರುವುದು ಸರ್ಕಾರ ಬೇಕಾಬಿಟ್ಟಿಯಾಗಿ ಆದೇಶವನ್ನು ಹೊರಡಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. 

 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಜೋಡಣೆ ಮಾಡುವ ವಿಚಾರದಲ್ಲಿ ಅನೇಕ ನ್ಯೂನತೆಗಳಿದ್ದು, ಈ ಆದೇಶವನ್ನು  ಕರ್ನಾಟಕ ರಾಜ್ಯ ಶಾಲಾಭಿವೃದ್ದಿ  ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವಿರೋಧಿಸುತ್ತದೆ  ಎಂದ ಅವರು,  ಸರ್ಕಾರ ಈ ಬಗ್ಗೆ ಸಮಗ್ರ ಚಿಂತನೆ ನಡೆಸಿ ಸೂಕ್ತತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

ಸುದ್ದಿಗೋಷ್ಠಿಯಲ್ಲಿ  ಎಸ್‌ಟಿಎಂಸಿ.ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಶಿವಕಳೆ ಆಂಜನೇಯ,  ತಾಲ್ಲೂಕು ಅಧ್ಯಕ್ಷ  ಶಿವಲಿಂಗಪ್ಪ ಹುಣಸಘಟ್ಟ,  ರಾಜ್ಯ ಸಂಘಟನಾ ಕಾರ್ಯದರ್ಶಿ ರುದ್ರಾನಾಯ್ಕ,  ತಾಲೂಕು ಮಹಿಳಾ ಅಧ್ಯಕ್ಷೆ ಎಂ.ಆರ್.ರಂಜಿತ ಸಿದ್ದಯ್ಯ,  ಜಿಲ್ಲಾ ಉಪಾಧ್ಯಕ್ಷೆ, ಚನ್ನಗಿರಿ ,  ಕಾರ್ಯದರ್ಶಿ ಸತೀಶ್‍ ಬನ್ನಿಕೋಡು, ಸಂಘಟನಾ ಕಾರ್ಯದರ್ಶಿ ರಮೇಶ್ ಕೋಟಿಮಲ್ಲೂರು, ಸದಾಶಿವಪ್ಪ ಚನ್ನಗಿರಿ ಮುಂತಾದವರು ಇದ್ದರು.

error: Content is protected !!