ಸರ್ಕಾರಿ ನೌಕರರ ಬೇಡಿಕೆ `ಒಪಿಎಸ್’ ಜಾರಿಗೆ ಸರ್ಕಾರ ಬದ್ಧ

ಸರ್ಕಾರಿ ನೌಕರರ ಬೇಡಿಕೆ `ಒಪಿಎಸ್’ ಜಾರಿಗೆ ಸರ್ಕಾರ ಬದ್ಧ

ಹೊನ್ನಾಳಿ ನೌಕರರ ಸಂಘದ  ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಭರವಸೆ

ಹೊನ್ನಾಳಿ,ಆ.22- ಸರ್ಕಾರಿ ನೌಕರರ ಪ್ರಮುಖ ಬೇಡಿಕೆ  ಒಪಿಎಸ್ ಜಾರಿಗೆ ತರುವಲ್ಲಿ ಸರ್ಕಾರ ಬದ್ಧವಾ ಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಹಮ್ಮಿ ಕೊಂಡಿದ್ದ ಸರ್ಕಾರಿ ನೌಕರರ ಸಂಘದ ನವೀಕರಣ ಕಟ್ಟಡದ ಉದ್ಘಾಟನೆ ಹಾಗೂ ಸರ್ಕಾರಿ ನೌಕರರ ತಾ ಲ್ಲೂಕು ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಸ್ತುತ ದಿನಗಳಲ್ಲಿ   ಅತ್ಯಂತ ಕಷ್ಟಕರವಾದ ಕೈಂಕರ್ಯ ಎಂದರೆ ರೈತಾಪಿ ವರ್ಗದವರದಾಗಿದ್ದು, ಇದಕ್ಕೆ ಕಾರಣ ವರುಣನ ಕಣ್ಣುಮುಚ್ಚಾಲೆ ಆಟವಾಗಿದೆ. ರಾಜ್ಯದಾದ್ಯಂತ ಮಳೆ ಕೈಕೊಟ್ಟು ಬರದ ಛಾಯೆ ಮೂ ಡಿದೆ. ನೆಮ್ಮದಿಯಿಂದ ಕೂಡಿರುವ ಸರ್ಕಾರಿ ನೌಕರರು   ಬಡ ಜನರಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಹೊನ್ನಾಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಆರಂಭದಿಂದಲೂ ಉತ್ತಮ ಕೆಲಸ, ಕಾರ್ಯಗಳನ್ನು ಹಮ್ಮಿಕೊಂಡು ಬಂದಿದ್ದು ಇದಕ್ಕೆ ಸಾಕ್ಷಿ ಎನ್ನುವಂತೆ ಸಂಘದ ಉತ್ತಮ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಿರುವುದಾಗಿದೆ ಎಂದು ಹೇಳಿದರು.

ಅಧಿಕಾರ, ಸ್ಥಾನಮಾನಗಳು ಯಾವತ್ತೂ ಶಾಶ್ವತವಲ್ಲ, ಅಧಿಕಾರದಲ್ಲಿದ್ದಾಗ ಹೇಗೆ ಮತ್ತು ಎಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದೆ ಎನ್ನುವುದು ಮುಖ್ಯವಾಗುತ್ತದೆ. ಸರ್ಕಾರಿ ನೌಕರರು ಉತ್ತಮ ಕೆಲಸ ಮಾಡಿದರೆ ಜನರು ಸದಾ ಸ್ಮರಿಸುತ್ತಾರೆ ಎಂದರು.

ಸರ್ಕಾರಿ ನೌಕರರ ತಾಲ್ಲೂಕು ಸಂಘದ ನೂತನ ಅಧ್ಯಕ್ಷ ಆರ್.ಎಸ್.ಪಾಟೀಲ್ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನಪುರ, ಅಧ್ಯಕ್ಷತೆ ವಹಿಸಿದ್ದ ನಿಕಟಪೂರ್ವ ಅಧ್ಯಕ್ಷ ಬಿ.ಕುಮಾರ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪಡೆದ ಸಮುದಾಯ ಆರೋಗ್ಯ ಅಧಿಕಾರಿ ಟಿ.ನಾಗರತ್ನ, ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಕುಮಾರ್, ರಾಜ್ಯ ಪರಿಷತ್ ಸದಸ್ಯ ಟಿ.ಪಿ.ರವಿಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಆರ್.ಎಸ್.ಪಾಟೀಲ್, ರಾಜ್ಯ ಪರಿಷತ್ ಸದಸ್ಯರಾಗಿ ಎಸ್.ಸಿ.ಬೀರೇಶ್, ಉಪಾಧ್ಯಕ್ಷರಾಗಿ ಕೆ.ಅರುಣ್ ಅಧಿಕಾರ ಸ್ವೀಕರಿಸಿದರು.

ನ್ಯಾಮತಿ ತಾಲ್ಲೂಕು ಸಂಘದ ಅಧ್ಯಕ್ಷ ಎಂ.ಬಿ.ನಿಂಗಪ್ಪ ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕುಮಾರನಾಯ್ಕ ನಿರೂಪಿಸಿದರು.

error: Content is protected !!