ಕನ್ನಡ ಭಾಷೆ ಶ್ರೀಮಂತಿಕೆಯ ಸಂಕೇತ

ಕನ್ನಡ ಭಾಷೆ ಶ್ರೀಮಂತಿಕೆಯ ಸಂಕೇತ

ಸಾಣೇಹಳ್ಳಿ,ಆ.15- ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ. ಶ್ರೀಮಂತಿಕೆ ಎಂದ ತಕ್ಷಣ ಹಣ, ಮನೆ, ತೋಟ ಇಂಥವು ಎಂದಾಗುತ್ತದೆ.  ಆದರೆ ಭಾಷೆಯೂ ಕೂಡ ಒಂದು ಸಂಪತ್ತು. ಆ ಭಾಷೆಯಲ್ಲಿ ಜನರು ಪ್ರಾವೀಣ್ಯತೆ ಸಾಧಿಸಿದಾಗ, ಆ ಭಾಷೆಯಲ್ಲಿ ಸತ್ವಯುತವಾದ ಕೃತಿಗಳು ಹೊರಬಂದಾಗ, ಆ ಭಾಷೆಯ ಜನರು ತಲೆ ಎತ್ತಿ ನಡೆಯುವಂತಹ ವಾತಾವರಣ ನಿರ್ಮಾಣವಾ ದಾಗ ಮಾತ್ರ ಒಂದು ಭಾಷೆ ಸಂಪತ್ತಾಗುವುದು   ಎಂದು ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ  ವಿಶ್ಲೇಷಿಸಿದರು.

ಇಲ್ಲಿನ ಶ್ರೀ ಗುರುಪಾದೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಗಸ್ಟ್ 11 ರ ಶುಕ್ರವಾರ  ಎರಡನೆಯ ದಂದಣ-ದತ್ತಣ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.  ದಿವ್ಯಸಾನ್ನಿಧ್ಯ ವಹಿಸಿದ್ದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿದರು.

ಕನ್ನಡದ ಎಂಟು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭ್ಯವಾಗಿದೆ ಎಂದರೆ, ಕನ್ನಡ ಭಾಷೆಯ ಶ್ರೀಮಂತಿಕೆಯ ಸಂಕೇತವಾಗಿದೆ. ನಮ್ಮ ಭಾಷೆ ಗದ್ಯ, ಪದ್ಯ, ಚುಟುಕು, ಕಥೆ, ಕಾದಂಬರಿ, ಕಾವ್ಯ, ಮುಂತಾದ ವೈವಿಧ್ಯಮಯವಾದ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ. 

ಆ ಭಾಷೆಯನ್ನು ಅರ್ಥೈಸಿ ಕೊಳ್ಳಲು ನಾವು ಬಹಳ ದೂರ ಹೋಗಬೇಕಾಗಿಲ್ಲ. ಹೆಚ್ಚು ಅಧ್ಯಯನಗೈಯ್ಯಬೇಕಾಗಿಲ್ಲ, ನಮ್ಮ ಮನೆಯಲ್ಲಿ ತಾಯಿ, ತಂದೆ, ನೆರೆ-ಹೊರೆಯವರು ಏನು ಮಾಡುತ್ತಿದ್ದಾರೆಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಪದಗಳು ನಮ್ಮೊಳಗೆ ಅಡಕ ವಾಗುತ್ತವೆ. ಆ ಪದಗಳನ್ನೇ ನಾವು ಹೊಸ ಹೊಸ ವಾಕ್ಯಗಳನ್ನಾಗಿ ರಚಿಸುತ್ತಾ ಹೋದರೆ ಆ ವಾಕ್ಯ ಗಳು ವಿಶೇಷವಾದ ವಾಕ್ಯಗಳನ್ನು ನೀಡುತ್ತವೆ. ಆ ಮೂಲಕ ಭಾಷಾ ಸಂಪತ್ತು ಹೆಚ್ಚುತ್ತದೆ ಎಂದರು. 

ಕನ್ನಡ ಭಾಷೆಯ ಇತಿಹಾಸ ಅಪಾರವಿದ್ದರೂ, ಹನ್ನೆರಡನೆಯ ಶತಮಾನ ಕನ್ನಡ ಭಾಷೆಗೆ ಒಂದು ಘನತೆ, ಗೌರವವನ್ನು ತಂದುಕೊಟ್ಟಿದೆ. ಮನುಷ್ಯ ತಲೆ ಎತ್ತಿ ಬಾಳುವಂತಾಗಿದೆ.

ನಾವು ಇಂದಿನ ‘ಕನ್ನಡ ಹೂರಣ’ ದಂದಣ ದತ್ತಣ ಗೋಷ್ಠಿಯಲ್ಲಿ ಭಾಗವಹಿಸಿದಾಗ ಬಹು ಸಂತೋಷವುಂಟಾಯಿತು.

 ವಿದ್ಯಾರ್ಥಿ ಭಾಷಣಕಾರರು ಹಾಗೂ ಅತಿಥಿಗಳು ಆಡಿದ ಮಾತುಗಳು ನಮ್ಮನ್ನು ಬಾಲ್ಯಕ್ಕೆ ಕರೆದೊಯ್ದವು ಎಂದು  ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು. 

ವಿದ್ಯಾರ್ಥಿ ಭಾಷಣಕಾರರಾಗಿ ಪೂಜಾ ಎಸ್, ಕನ್ನಡ ನಾಡು- ನುಡಿ ಕುರಿತು, ವರ್ಷ ಕೆ. ಜೆ. ಕನ್ನಡ ಸಾಹಿತ್ಯ ಉಪಭಾಷೆಯ ಕುರಿತು, ಶಶಾಂಕ್ ಈ.ಟಿ, ಕನ್ನಡ ಸಾಹಿತ್ಯ ಪ್ರಕಾರಗಳ ಕುರಿತು, ಸಚಿನ್ ಡಿ, ವಚನ ಸಾಹಿತ್ಯ, ಸಾಹಿತ್ಯ ಪ್ರಕಾರಗಳ ಕುರಿತು ಗೋಷ್ಠಿ ಮಂಡಿಸಿದರು. 

ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ  ಎ. ಸಿ. ಚಂದ್ರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು, ಸಮೃದ್ಧಿಯಾಗಿರಲು ಮಣ್ಣು, ನದಿ, ಬೆಳೆ ಮೊದಲಾದವು ಕಾರಣವಾಗಿವೆ. ಕನ್ನಡ ಭಾಷೆಯನ್ನು ಸರಿಯಾಗಿ ಕಲಿತರೆ ಅನ್ಯ ಭಾಷೆಗ ಳನ್ನು ಸುಲಭವಾಗಿ ಕಲಿಯಬಹುದು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಹೊಸದುರ್ಗ ತಾಲ್ಲೂಕು ಕಾರೇಹಳ್ಳಿಯ ಶ್ರೀ ಗುರು ರೇಣುಕ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ದಾಸಪ್ಪ ಮಾತನಾಡಿ ಕನ್ನಡ ಸಾಹಿತ್ಯದ ಮಜಲುಗಳು, ವಚನ ಸಾಹಿತ್ಯ ಶಿವಶರಣರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದು ನುಡಿದರು. 

ಗೋಷ್ಠಿಯ ಆರಂಭದಲ್ಲಿ ನಾಗರಾಜ್ ಮತ್ತು ವಿದ್ಯಾರ್ಥಿಗಳು ವಚನ ಗಾಯನ ಹಾಗೂ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿಕೊಟ್ಟರು.   ಇಂಚರ ಎಸ್. ಜೆ. ಸ್ವಾಗತಿಸಿದರೆ, ತೀರ್ಥರಾಜ ಎನ್. ಎಸ್. ನಿರೂಪಿಸಿದರು. 

ರಜೆಯ ನಿಮಿತ್ತ ಸಾಣೇಹಳ್ಳಿಯಲ್ಲಿ ತಂಗಿರುವ ದುಬೈ ಕನ್ನಡಿಗ ವಿದ್ಯಾರ್ಥಿ ನಿಹಾರ್ ಸ್ಪಷ್ಟವಾದ ಕನ್ನಡದಲ್ಲಿ ವಂದಿಸಿದರು.

error: Content is protected !!