ಜನಸಾಮಾನ್ಯರ ಮನಸ್ಸನ್ನು ಸೆಳೆಯುವಂತಹ ಅಂಶ ಇರುವುದು ವೀರಗಾಸೆ ಕಲೆಗೆ ಮಾತ್ರ

ಜನಸಾಮಾನ್ಯರ ಮನಸ್ಸನ್ನು ಸೆಳೆಯುವಂತಹ ಅಂಶ ಇರುವುದು ವೀರಗಾಸೆ ಕಲೆಗೆ ಮಾತ್ರ

ಸಿರಿಗೆರೆ ಮಠದಲ್ಲಿನ ರಾಜ್ಯ ಮಟ್ಟದ ವೀರಗಾಸೆ ಸ್ಪರ್ಧೆಯಲ್ಲಿ ಪ್ರೊ. ಎಸ್.ಬಿ. ರಂಗನಾಥ್

ಸಿರಿಗೆರೆ, ಆ.11- ಶ್ರೀ ಗುರು ಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಯವರು ದೂರದೃಷ್ಟಿಯ ದಾರ್ಶನಿಕ. ಶ್ರೀಗಳ ದೂರದೃಷ್ಟಿಯ ಸತ್ಫಲವೇ ಇಂದು ಸಿರಿಗೆರೆಯ ಶ್ರೀಮಠ ಸಾಗರದಾಚೆಗೂ ತನ್ನ ಬೆಳಕನ್ನು ಪಸರಿಸಿದೆ ಎಂದು ಶ್ರೀ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ. ರಂಗನಾಥ್ ಹೇಳಿದರು.

ಸಿರಿಗೆರೆಯಲ್ಲಿ ಶ್ರೀ ಗುರು ಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಯವರ 85ನೇ ಶ್ರದ್ಧಾಂಜಲಿಯ ಪ್ರಯುಕ್ತ ಶುಕ್ರವಾರ ಸಂಜೆ ನಡೆದ ರಾಜ್ಯಮಟ್ಟದ ವೀರಗಾಸೆ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜನಸಾಮಾನ್ಯರ ಮನಸ್ಸನ್ನು ಸೆಳೆಯುವಂತಹ ಅಂಶ ಇರುವುದು ವೀರಗಾಸೆ ಕಲೆಗೆ ಮಾತ್ರ. ವೀರಗಾಸೆ ಪ್ರದರ್ಶನ ಮಾಡುವಾಗ ಅವರಲ್ಲಿ ಲವಲವಿಕೆ, ನಿಖರತೆ ಹಾಗೂ ಶಬ್ಧಗಳ ಉಚ್ಚಾರಣೆಯ ಭಾವ ಇರುವುದು ಕಾಣಸಿಗುತ್ತದೆ ಎಂದರು. 

ಧರ್ಮಗುರುವೊಬ್ಬ ಹೊಸದಕ್ಕೆ ಚಾಲನೆ ಕೊಡದೇ ಹೋದರೆ, ಸಮಾಜವನ್ನು ಪ್ರೀತಿಯಿಂದ ಮುಟ್ಟುತ್ತಾ, ಅದರ ವೈರುಧ್ಯಗಳ ಜೊತೆ ಮಾತಾಡದೇ ಹೋದರೆ ಆ ಧರ್ಮಗುರು ಗುರುವಲ್ಲ ಎಂಬ ಮಾತನ್ನು  ಅಕ್ಷರಶಃ  ಪಾಲಿಸಿ ಕಾರ್ಯರೂಪಕ್ಕಿಳಿಸಿದ ಕೀರ್ತಿ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿಯವರಿಗೆ ಸಲ್ಲುತ್ತದೆ. 20ನೇ ಶತಮಾನದ ಆರಂಭದಲ್ಲಿ ಧರ್ಮದ ಹೆಸರಿನ ಯಾಗ, ಅಜ್ಞಾನ, ಮೌಢ್ಯ, ಕಂದಾಚಾರಗಳೆಂಬ ಅಂಧಕಾರದಲ್ಲಿ ಮುಳುಗಿದ್ದ ಜನತೆಗೆ  ಇವುಗಳಿಂದ ಹೊರಬರಲು ಶಿಕ್ಷಣ ಎಂಬ ಬೆಳಕಿನಿಂದ ಮಾತ್ರ ಸಾಧ್ಯ ಎಂದು ಅರಿತು, ಧರ್ಮದ ಮೂಲ ಆಶಯಗಳನ್ನು ನಿಜಾರ್ಥದಲ್ಲಿ ಜನತೆಗೆ ಬಿತ್ತುವ ಕಾರ್ಯಕ್ಕೆ ನಾಂದಿ ಹಾಡಿದರು ಎಂದರು. 

ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಮಾತನಾಡಿ, ನಮ್ಮ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕಲೆಯನ್ನು ಆಸ್ವಾದಿಸುವ ಪ್ರಜೆಗಳಾಗದೇ ಅವುಗಳನ್ನು ಉಳಿಸಿ, ಬೆಳೆಸುವ ಕಾರ್ಯ ಬೆಳೆಸಿಕೊಳ್ಳಬೇಕು ಎಂದರು.

ರಾಜ್ಯಮಟ್ಟದ ಪುರುಷರ ವೀರಗಾಸೆ ಸ್ಪರ್ಧೆಯಲ್ಲಿ  ಕುಡ್ಲೂರಿನ ಶ್ರೀ ವೀರಭದ್ರೇಶ್ವರ ಕಲಾ ತಂಡದವರು ಪ್ರಥಮ, ಬಂಡ್ರೆಯ ಶ್ರೀ ವೆಂಕಟೇಶ್ವರ ತಂಡದವರು ದ್ವಿತೀಯ, ಹರಳಹಳ್ಳಿಯ ಶ್ರೀ ಕಾಟಲಿಂಗೇಶ್ವರ ವೀರಗಾಸೆ ಕಲಾ ತಂಡದವರು ತೃತೀಯ ಸ್ಥಾನಗಳನ್ನು ಪಡೆದಿದ್ದು, ಮಹಿಳಾ ವಿಭಾಗದಲ್ಲಿ ಅಸುಂಡಿಯ ಬಸವಶ್ರೀ ಮಹಿಳಾ ವೀರಗಾಸೆ ಕಲಾ ತಂಡದವರು ಪ್ರಥಮ, ಬಾವಿಕೆರೆಯ ಶ್ರೀ ಚಾಮುಂಡೇಶ್ವರಿ ವೀರಗಾಸೆ ಕಲಾ ತಂಡದವರು ದ್ವಿತೀಯ, ದುಗ್ಲಾಪುರದ ಮಂಜುಶ್ರೀ ಮಹಿಳಾ ವೀರಗಾಸೆ ಕಲಾ ತಂಡದವರು ತೃತೀಯ ಸ್ಥಾನಗಳನ್ನು ಪಡೆದರು. ವಿಜೇತ ತಂಡದವರಿಗೆ ಕ್ರಮವಾಗಿ ಪ್ರಥಮ ಬಹುಮಾನ ರೂ 15,000, ದ್ವಿತೀಯ 12,000, ತೃತೀಯ 9,000 ರೂ.ಗಳನ್ನು ನಗದು ಬಹುಮಾನವಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಭುಜಂಗ ನಗರದ ರೊಟ್ಟಿ ಷಣ್ಮುಖಪ್ಪ, ಕಲಾತಂಡದವರು, ವಿದ್ಯಾರ್ಥಿಗಳು, ಅಧ್ಯಾಪಕ ವರ್ಗದವರು ಇದ್ದರು.

error: Content is protected !!