ಸಾಧನೆಗೆ ಯಾವುದೇ ಅಡ್ಡ ದಾರಿಗಳಿಲ್ಲ; ಪರಿಶ್ರಮ ಒಂದೇ ದಾರಿ

ಸಾಧನೆಗೆ ಯಾವುದೇ ಅಡ್ಡ ದಾರಿಗಳಿಲ್ಲ;  ಪರಿಶ್ರಮ ಒಂದೇ ದಾರಿ

`ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

ಸಾಣೇಹಳ್ಳಿ, ಜು. 24- ಸಾಧನೆಗೆ ಯಾವುದೇ ಅಡ್ಡ ದಾರಿಗಳು ಇರುವುದಿಲ್ಲ, ಇರುವುದೊಂದೇ ದಾರಿ ಅದು ಪರಿಶ್ರಮದ ದಾರಿ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ನಕಾ ರಾತ್ಮಕ ಭಾವನೆಗಳನ್ನು ಬಿಟ್ಟು, ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮೀಜಿ  ಕಿವಿಮಾತು ಹೇಳಿದರು.

ಇಲ್ಲಿನ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆಗಳ  ಸಂಯುಕ್ತಾಶ್ರಯದಲ್ಲಿ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ 2023-24 ನೇ ಸಾಲಿನ `ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ’ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ಆದರೆ ಇಂದು ದೊಡ್ಡ-ದೊಡ್ಡ ಸ್ಥಾನಗಳಲ್ಲಿ ರುವವರೇ ಅಡ್ಡ ದಾರಿ ಹಿಡಿದು, ಬದುಕಿನಲ್ಲಿ ವಿಫಲರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಮುಖ್ಯವಾದ ಕಾರಣ ಮನೆ ಮತ್ತು ಶಾಲೆಗಳಲ್ಲಿ ಸಕಾರಾತ್ಮಕವಾದ ಸಂಸ್ಕಾರ ದೊರೆಯದೇ ಇರುವುದು. ಮನೆಯಲ್ಲಿ ತಂದೆ-ತಾಯಿ-ಬಂಧು-ಬಾಂಧವರು ಮತ್ತು ಶಾಲೆಯಲ್ಲಿ ಶಿಕ್ಷಕರು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ನೀಡುವ ಕೆಲಸವನ್ನೂ ಮಾಡಬೇಕು.

ಮಗು ಸ್ವಲ್ಪ ಸಾಧನೆ ಮಾಡಿದರೂ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಅಡ್ಡ ದಾರಿ ಹಿಡಿದು ಹೆಚ್ಚು ಅಂಕಗಳಿಸಿ ಪಾಸಾಗುವುದಕ್ಕಿಂತ ಫೇಲಾ ಗುವುದೇ ಉತ್ತಮವೆಂದು ತಿಳಿ ಹೇಳಬೇಕು. ಫೇಲಾಗುವುದು ಅವಮಾನವಲ್ಲ; ಅದು ಅನು ಭವವನ್ನು ಗಟ್ಟಿಗೊಳಿಸುವುದು ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು ಎಂದರು.

ಇಲ್ಲಿನ ಪ್ರೌಢಶಾಲೆಯಲ್ಲಿ ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಪಲ್ಲವಿ ಎನ್ನುವ ವಿದ್ಯಾರ್ಥಿನಿ ಆಟೋದಿಂದ ಬಿದ್ದು ತಲೆಬುರುಡೆಗೆ ಗಾಯವಾಗಿ ಸುಮಾರು 20 ದಿನಗಳ ಕಾಲ ಎಚ್ಚರವಿಲ್ಲದೆ ಆಸ್ಪತ್ರೆಯಲ್ಲಿ ಮಲಗಿದ್ದಳು. ಆಗ ನಾವು ವೈದ್ಯರನ್ನು ಸಂಪರ್ಕಿಸಿ, ಎಷ್ಟು ಖರ್ಚಾದರೂ ಪರವಾಗಿಲ್ಲ ಚಿಕಿತ್ಸೆ ಕೊಡಿ ಎಂದಾಗ ಅವರು ಹೇಳಿದ್ದು; ಬುದ್ದಿ, ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಈ ಮಗು ಉಳಿಯುವುದು ಕಷ್ಟ ಎಂದು. ಆದರೆ ಪಲ್ಲವಿ ಜೀವನ್ಮರಣದ ಮಧ್ಯೆ ಹೋರಾಡಿ ಬದುಕಿ ಬಂದಿದ್ದಾಳೆ. ಅಷ್ಟೇ ಅಲ್ಲ 530 ಅಂಕಗಳನ್ನು ಪಡೆದುಕೊಂಡಿದ್ದಾಳೆ. ಇದು ಎಲ್ಲರೂ ಹೆಮ್ಮೆ ಪಡಬೇಕಾದ ವಿಷಯ. ಪಲ್ಲವಿಯ ಆತ್ಮವಿಶ್ವಾಸ, ಛಲ ಮಕ್ಕಳೆಲ್ಲರಿಗೂ ಮಾದರಿ ಎಂದು ತಿಳಿಸಿದರು.

ವಿದ್ಯಾರ್ಥಿ ಸಂಘಗಳ ಉದ್ಘಾಟನೆ ನೆರವೇರಿಸಿದ   ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ  ಉಪ ನಿರ್ದೇಶಕ  ಕೆ. ರವಿಶಂಕರ ರೆಡ್ಡಿ ಮಾತನಾಡಿ,  ಪ್ರತಿಭೆ ಪರಿಶ್ರಮ ಪಡುವವರ ಸ್ವತ್ತೇ ಹೊರತು; ಸೋಮಾರಿಗಳದ್ದಲ್ಲ. ತಂದೆ-ತಾಯಿಗಳಿಗೆ ಹೆಸರು ಬರುವುದು ಮಕ್ಕಳ ವ್ಯಕ್ತಿತ್ವದಿಂದ.  ಮೌಲ್ಯಗಳನ್ನು ಪುನರ್ ಸ್ಥಾಪನೆ ಮಾಡಬೇಕಾಗಿದೆ. ಸ್ವಾವಲಂಬಿ ಜೀವನದ ಮೂಲಕ ಸಂಸ್ಕಾರವಂತ ಜೀವನ ರೂಪಿಸ ಬೇಕಾಗಿದೆ ಎಂದರು. 

ಅತಿಥಿಯಾಗಿ ಭಾಗವಹಿಸಿದ್ದ ಹೊಸದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ಮಾತನಾಡಿ,   ಹುಟ್ಟಿನಿಂದಲೇ ಬುದ್ಧಿವಂತರಾದವರು ತಮ್ಮ ನಿರ್ಲಕ್ಷ್ಯದಿಂದ ಅವನತಿಯ ಹಾದಿ ಹಿಡಿಯಬಹುದು. ಆದರೆ ಪರಿಶ್ರಮದಿಂದ ಬುದ್ಧಿವಂತರಾದವರು ಎಂದೂ ಅವನತಿಯ ಹಾದಿ ತುಳಿಯುವುದಿಲ್ಲ. ಹೀಗಾಗಿ ಪರಿಶ್ರಮವೊಂದೇ ನಮ್ಮನ್ನು ಕಾಪಾಡುವ ದೈವ ಎಂದರು. 

ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಶ್ರೀ ಶಿವಕುಮಾರ ವಿದ್ಯಾವರ್ಧಕ ಸಂಘ ಉಪಾಧ್ಯಕ್ಷ ಡಿ. ವಿ. ಗಂಗಾಧರಪ್ಪ ಮಾತನಾಡಿ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ಕೆಲಸ, ಕಾರ್ಯಗಳನ್ನು ಮಾಡಬೇಕು. ಒಬ್ಬರೇ ಮಾಡುವ ಕೆಲಸಕ್ಕೂ ಸಂಘದ ಮೂಲಕ ಮಾಡುವ ಕೆಲಸಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಸಂಘಕ್ಕೆ ಮಹತ್ತರ ಶಕ್ತಿ ಇರುತ್ತದೆ ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಎ. ಸಿ. ಚಂದ್ರಣ್ಣ ಮಾತನಾಡಿ,   ಇಲ್ಲಿನ ಶಿಕ್ಷಕರು ಬಹಳ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇಲ್ಲಿಗೆ ವರ್ಷದಿಂದ ವರ್ಷಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ  ಎಂದರು.

ಪ್ರಾಸ್ತಾವಿಕವಾಗಿ ಅಧ್ಯಾಪಕ ಹೆಚ್.ಎಸ್. ದ್ಯಾಮೇಶ್ ಮಾತನಾಡಿದರು.  ಜಿ.ಆರ್. ಸುಪ್ರಿಯಾ ಸ್ವಾಗತಿಸಿದರೆ, ಎಂ. ಪ್ರತೀಕ್ಷಾ ವಂದಿಸಿದರು. ಜಾಹ್ನವಿ ಎಸ್. ಗೌಡ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯ  ಎನ್. ಹೆಚ್. ಹೊನ್ನೇಶಪ್ಪ, ವಿ.ಬಿ.ಚಳಗೇರಿ, ಎ.ಎಸ್.ಶಿಲ್ಪಾ, ಬಿ.ಎಸ್. ಶಿವಕುಮಾರ್ ಉಪಸ್ಥಿತರಿದ್ದರು. 

ಅಪಘಾತಕ್ಕೀಡಾಗಿ, ಶಸ್ತ್ರಚಿಕಿತ್ಸೆಗೆ ಒಳಗಾಗಿಯೂ ಧೃತಿಗೆಡದೆ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಜಿಲ್ಲೆಗೇ ಅತಿ ಹೆಚ್ಚು ಅಂಕ (530) ಗಳನ್ನು ಪಡೆದ ಎನ್.ಕೆ. ಪಲ್ಲ ವಿಯನ್ನು ವಿಶೇಷವಾಗಿ ಅಭಿನಂದಿಸಲಾಯಿತು. 

error: Content is protected !!