ಚಲನಶೀಲತೆ ಇದ್ದಾಗ ಮಾತ್ರ ಪ್ರಗತಿ ಸಾಧ್ಯ

ಚಲನಶೀಲತೆ ಇದ್ದಾಗ ಮಾತ್ರ ಪ್ರಗತಿ ಸಾಧ್ಯ

ಬೆಂಗಳೂರು `ಸಮಾಜ ಮುಖಿ ನಡಿಗೆ’ ತಂಡದ ಸಭೆಯಲ್ಲಿ ಶ್ರೀ ಪಂಡಿತಾರಾಧ್ಯ  ಸ್ವಾಮೀಜಿ

ಸಾಣೇಹಳ್ಳಿ ಜು. 9- ಸಮಾಜ ನಿಂತ ನೀರಾಗಬಾರದು. ಅದಕ್ಕೆ ಚಲನಶೀಲತೆ ಇದ್ದಾಗ ಮಾತ್ರ ಪ್ರಗತಿ ಸಾಧ್ಯ. ನಾವು ಜಂಗಮರಾದರೆ ಸಮಾಜವೂ ಜಂಗಮವಾಗುವುದು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಿಸಿದರು.

ಇಲ್ಲಿನ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಬೆಂಗಳೂರಿನ `ಸಮಾಜಮುಖಿ ನಡಿಗೆ’ಯ 50 ಜನರ ತಂಡ ಕ್ಷೇತ್ರ ವೀಕ್ಷಣೆಗಾಗಿ ಬಂದಾಗ ಆಯೋಜಿಸಿದ್ದ ಅನೌಪಚಾರಿಕ ಸಭೆಯ ಸಾನ್ನಿಧ್ಯ ವಹಿಸಿ  ಸ್ವಾಮೀಜಿ ಮಾತನಾಡಿದರು. 

ಸಮಾಜದಲ್ಲಿ ಬದಲಾವಣೆ ತರಬೇಕು ಎನ್ನುವ ಮಹದುದ್ಧೇಶ ಈ ಸಮಾಜಮುಖಿ ನಡಿಗೆಯ ಸದಸ್ಯರದ್ದು. ಪತ್ರಿಕೆಗಳು ಸಮಾಜಕ್ಕೆ ಹಿಡಿದ ಕನ್ನಡಿ ಇದ್ದಂತೆ. ಅನೇಕ ಬಾರಿ ಸಮಾಜದ ಬದಲಾವಣೆ ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿ ಉಂಟಾಗುವುದು. ಆದರೆ ಅದೇ ಸತ್ಯವಲ್ಲ. ಮನಸ್ಸು ಮಾಡಿದರೆ ಏನೆಲ್ಲವೂ ಸಾಧ್ಯ ಎನ್ನುವುದನ್ನು ಇತಿಹಾಸದಲ್ಲಿ ನೋಡಿದ್ದೇವೆ. ಹಾಗಾಗಿ ನಿರಾಶರಾಗದೆ ಜಂಗಮತ್ವವನ್ನು ಕಾಪಾಡಿಕೊಂಡು, ಆರೋಗ್ಯಯುಕ್ತ ಸಮಾಜವನ್ನು ಕಟ್ಟಲು ಬಯಸುವ ಇನ್ನೂ ಅನೇಕ ಜನ ನಮ್ಮ ಮಧ್ಯೆ ಇದ್ದಾರೆ. ಅಂಥವರನ್ನೆಲ್ಲ ಒಟ್ಟುಗೂಡಿಸಿ ಹೊಸ ಸಮಾಜವನ್ನು ಕಟ್ಟಲು ಸಾಧ್ಯ. ಅಂಥ ಪ್ರಯತ್ನಗಳಲ್ಲಿ ಸಮಾಜಮುಖಿ ನಡಿಗೆಯೂ ಒಂದು ಎಂದು ಭಾವಿಸಿದ್ದೇವೆ ಎಂದು ಹೇಳಿದರು. 

ಗೊಲ್ಲಹಳ್ಳಿ ಜಾಗೃತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಬೆಳಗೆರೆ ಮಾತನಾಡಿ. ಸಮಾಜಮುಖಿ ಪತ್ರಿಕೆಯ ಓದುಗರ ಬಳಗವು `ಸಮಾಜ ಮುಖಿ ನಡಿಗೆ’ ಎನ್ನುವ ಯೋಜನೆಯನ್ನು ಹಾಕಿಕೊಂಡಿದೆ. ಅದರನ್ವಯ ಇದುವರೆಗೆ ಮೂರು ದಿನಗಳಿಗೊಂದರಂತೆ ಇದುವರೆಗೂ 14 ನಡಿಗೆಗಳನ್ನು ರಾಜ್ಯದಾದ್ಯಂತ ಮಾಡಿದೆ. 

ಇಂದು 15ನೆ ನಡಿಗೆಯಾಗಿ ಸಾಣೇಹಳ್ಳಿಗೆ ಬಂದಿದೆ. ಜನರ ಹತ್ತಿರ ಹೋಗಿ ಅವರ ಕಷ್ಟ-ಸುಖಗಳನ್ನು ಅರಿತು, ಅವುಗಳಿಗೆ ಸೂಕ್ತವಾಗಿ ಸ್ಪಂದಿಸುವ, ಪ್ರತಿಕ್ರಿಯಿಸುವ ಉದ್ದೇಶ ಈ ನಡಿಗೆಯದ್ದಾಗಿದೆ. 

ಈ ನಮ್ಮ ತಂಡದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ನ್ಯಾಯಾಲಯ, ವ್ಯಾಪಾರ ಮೊದಲಾದ ಎಲ್ಲ ಕ್ಷೇತ್ರಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳಿದ್ದಾರೆ. 

ಕನ್ನಡದ ಮನಸುಗಳಿಗೆ ಜಗತ್ತಿನ ದೃಷ್ಟಿಕೋನ ನೀಡುವ, ಕನ್ನಡದ ಕಂಪನ್ನು ಜಗತ್ತಿನಾದ್ಯಂತ ಹರಡುವ, ಹಳ್ಳಿಯ ಪ್ರತಿಭೆಗಳನ್ನು ಜಗತ್ತಿಗೇ ಪರಿಚಯಿಸುವ ಉದ್ದೇಶವಿದೆ ಎಂದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮಹದೇವ್, ಬೆಂಗಳೂರಿನ ಮಕ್ಕಳ ಹಕ್ಕಿನ ಹೋರಾಟಗಾರ್ತಿ ಕವಿತಾರತ್ನ ಉಪಸ್ಥಿತರಿದ್ದರು.

ಅಧ್ಯಾಪಕ ಹೆಚ್.ಎಸ್. ದ್ಯಾಮೇಶ್ ಸಾಣೇಹಳ್ಳಿ ಕ್ಷೇತ್ರದ ಪರಿಚಯ ಮಾಡಿಕೊಟ್ಟರು. ಆರಂಭದಲ್ಲಿ ಸಂಗೀತ ಶಿಕ್ಷಕ ಹೆಚ್.ಎಸ್. ನಾಗರಾಜ್ ತಬಲಾ ಸಾಥಿಯಲ್ಲಿ ಶರಣ್ ತಂಡ ವಚನಗೀತೆಗಳನ್ನು ಹಾಡಿದರು. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ಆಕರ್ಷಕ ನೃತ್ಯ ರೂಪಕಗಳನ್ನು ನೀಡಿದರು. 

ರಮೇಶ್ ಗಬ್ಬೂರು ಜಾಗೃತಗೀತೆ ಹಾಡಿದರು. ಅಧ್ಯಾಪಕಿ ಕಾವ್ಯ ಎನ್. ಆರ್. ಸ್ವಾಗತಿಸಿದರೆ, ಬಿ. ಎಸ್. ಶಿವಕುಮಾರ್ ಕಾರ್ಯಕ್ರಮ ನಡೆಸಿ ಕೊಟ್ಟರು.  

error: Content is protected !!