ದಾವಣಗೆರೆ, ಜು. 23- ಗುರುವಾರ ಸಂಜೆ ನಡೆದಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ಚಿಗಟೇರಿ ಜಿಲ್ಲಾಸ್ಪತ್ರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ, ಮೃತ ವ್ಯಕ್ತಿಯ ಸಂಬಂಧಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಶಿವಾಲಿ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಆಟೋದಲ್ಲಿ ಈರುಳ್ಳಿ ವ್ಯಾಪಾರ ಮಾಡುತ್ತಿದ್ದ ಜಾಲಿನಗರ ವಾಸಿ ಆಸೀಫ್ (34) ಗುರುವಾರ ಸಂಜೆ ಹರಿಹರದಿಂದ ದಾವಣಗೆರೆಗೆ ಹಿಂತಿರುಗುತ್ತಿದ್ದ ವೇಳೆ ಅಮರಾವತಿ ಬಳಿ ಕಾರೊಂದು ಸಮೀಪ ಬಂದು ಆಟೋ ಪಲ್ಟಿಯಾಗಿ ತೀವ್ರವಾಗಿ ಗಾಯಗೊಂಡಿದ್ದರು.
ಅವರನ್ನು ತುರ್ತು ಚಿಕಿತ್ಸೆಗಾಗಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕರೆತರಲಾಗಿತ್ತು. ಈ ವೇಳೆ ತುರ್ತು ಚಿಕಿತ್ಸೆ ನೀಡದೆ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಗಳು ಅನಗತ್ಯ ಕಾಲಾಹರಣ ಮಾಡಿ ನಿರ್ಲಕ್ಷ್ಯ ವಹಿಸಿದ್ದರಿಂದ ಆಸೀಫ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಗಾಯಗೊಂಡಿದ್ದ ಆಸೀಫ್‌ಗೆ ಉಸಿರಾಟದ ತೊಂದರೆ ಇದೆ. ಕೂಡಲೇ ಆಕ್ಸಿಜನ್ ನೀಡಿ ಎಂದು ಸಂಬಂಧಿಕರೊಬ್ಬರು ಹೇಳಿದಾಗ ಅಲ್ಲಿದ್ದ ಸಿಬ್ಬಂದಿಗಳು ಸ್ಪಂದಿಸದೇ ಗೂಂಡಾ ವರ್ತನೆ ತೋರಿದ್ದಾರೆ ಎಂದು ತಂಜೀಮುಲ್ ಮುಸ್ಲಿಮಿನ್ ಫಂಡ್ ಅಸೋಸಿಯೇಷನ್ ಮಾಜಿ ಕಾರ್ಯದರ್ಶಿ ಸೈಯದ್ ರಿಯಾಜ್ ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಶಿವಾಲಿ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಡಿಹೆಚ್‌ಒ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ
ಈ ವೇಳೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಂಡ ರಚಿಸಿ, ನಿರ್ಲಕ್ಷಿತರ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಮೃತ ಕುಟುಂಬಕ್ಕೆ ಪರಿಹಾರ ನೀಡಲು ತಮಗೆ ಅಧಿಕಾರವಿಲ್ಲ. ಈ ಕುರಿತು ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ವೈದ್ಯರ ನಿರ್ಲಕ್ಷತೆ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಮೃತರ ಸಂಬಂಧಿಗಳು ದೂರು ದಾಖಲಿಸಿದ್ದಾರೆ. ಪ್ರತಿಭಟನೆಯಲ್ಲಿ ಸೈಯದ್ ರಿಯಾಜ್, ಜಾಫರ್, ಆರೀಫ್, ಸುಹೇಲ್ ಇತರರು ಇದ್ದರು.