ದಾವಣಗೆರೆ, ಜೂ. 6- ಪರಿಸರ ದೇವರು ಕೊಟ್ಟ ವರ. ಇದನ್ನು ನಾವು ಕಾಪಾಡಿಕೊಳ್ಳಬೇಕು. ಆದ್ದರಿಂದ ಪ್ರತಿ ಯೊಬ್ಬರೂ ಕನಿಷ್ಟ 2 ಗಿಡಗಳನ್ನಾದರೂ ನೆಟ್ಟು ಪೋಷಿಸಬೇಕು. ಪ್ಲಾಸ್ಟಿಕ್ ಇಲ್ಲದಿ ದ್ದರೆ ಜೀವನವೇ ಇಲ್ಲವೆಂದು ತಿಳಿದಿರುವ ಈ ಸಮಾಜಕ್ಕೆ ಪ್ಲಾಸ್ಟಿಕ್ರಹಿತ ಜೀವನ ಕಲಿಸಬೇಕಾಗಿದೆ. ಆಗ ಮಾತ್ರ ಪರಿಸರ ಉಳಿಸಬಹುದು. ಅನ್ಮೋಲ್ ವಿದ್ಯಾಸಂಸ್ಥೆಯು ಈ ದಿಸೆಯಲ್ಲಿ ಪರಿಸರ ಪರ ಕೆಲಸ ಮಾಡುತ್ತಿರುವುದು ಹಾಗೂ ಪ್ರತಿವರ್ಷ ನೂರು ಗಿಡಗಳನ್ನು ನೆಟ್ಟು ಪೋಷಿಸುತ್ತಿರುವುದು ಮತ್ತು ಮಕ್ಕಳಲ್ಲಿ ಪ್ರಕೃತಿಯ ಬಗ್ಗೆ ಅರಿವು ಮೂಡಿಸುತ್ತಿ ರುವುದು ಶ್ಲ್ಯಾಘನೀಯವಾಗಿದೆ ಎಂದು ಎಸ್.ಕೆ. ದೇವರಾಜ್ ತಿಳಿಸಿದರು.
ಶಿರಮಗೊಂಡನಹಳ್ಳಿಯ ಅನ್ಮೋಲ್ ಪಬ್ಲಿಕ್ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಸಿ.ಜಿ. ದಿನೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪ್ರಕೃತಿಯು ನಮಗೆ ದೊರೆತಿರುವ ಅಮೂಲ್ಯ ಸಂಪತ್ತು. ಆದರೆ ಮನುಷ್ಯನ ದುರಾಸೆಯಿಂದ ಕಾಡುಗಳು ನಾಶಗೊಳ್ಳುತ್ತಿವೆ. ಇದೇ ರೀತಿ ಅರಣ್ಯವನ್ನು ನಾಶಮಾಡುತ್ತಾ ಹೋದರೆ ಭೂಮಿಯ ಅಂತ್ಯಕ್ಕೆ ಮನುಷ್ಯನೇ ಕಾರಣನಾಗುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಮರಗಳನ್ನು ಕಡಿಯುವ ಬದಲು ಹೊಸ ಗಿಡವನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗ ಬೇಕಿದೆ. ಅನ್ಮೋಲ್ ವಿದ್ಯಾಸಂಸ್ಥೆಯು ಪ್ರತಿವರ್ಷ ನೂರು ಗಿಡಗಳನ್ನು ನೆಟ್ಟು ಪೋಷಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಅರಣ್ಯಾಧಿಕಾರಿ ಕೊಟ್ರೇಶ್, ಪರಿಸರ ಪ್ರೇಮಿ ವಸಂತ್, ವಿಸ್ತಾರ ಸುದ್ಧಿವಾಹಿನಿ ಯವರು, ಶಾಲೆಯ ಪ್ರಾಂಶುಪಾಲ ಯು. ಕೋಟ್ರೇಶ್, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.