ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ
ರಾಣೇಬೆನ್ನೂರು, ಜೂ.6- ಚುನಾವಣೆಯಲ್ಲಿ ಅಸ ಮಾಧಾನಿತರ ಮನದಲ್ಲಿ ಕಾಂಗ್ರೆಸ್ ಮೂರು-ನಾಲ್ಕನೇ ಸ್ಥಾನ ಪಡೆದಿತ್ತು. ಮತದಾರರ ಮನದಲ್ಲಿ ಮೊದಲ ಸ್ಥಾನ ಗಳಿಸಿತ್ತು. ಮತದಾರರ ಮನದಲ್ಲಿರುವ ಸ್ಥಾನವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತೇನೆ ಎಂದು ರಾಣೇ ಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಅವರು ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ನಿನ್ನೆ ನಡೆದ ಅಭಿನಂದನೆ ಹಾಗೂ ಕೃತಜ್ಞತೆ ಅರ್ಪಣೆ ಸಭೆಯಲ್ಲಿ ಮಾತನಾಡುತ್ತಿದ್ದರು.
ನಮ್ಮ ಮುಖಂಡರು ಚುನಾವಣೆ ಸಂದರ್ಭದಲ್ಲಿ ಕೊಟ್ಟಮಾತಿನಂತೆ ನಡೆದು 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ. ನಾನೂ ಸಹ ನಿರುದ್ಯೋಗ ಮುಕ್ತ ರಾಣೇಬೆನ್ನೂರು ತಾಲ್ಲೂಕು, ಬರ ರಹಿತ ಹಾವೇರಿ ಜಿಲ್ಲೆ. ಈ 2 ಗ್ಯಾರಂಟಿಗಳನ್ನು ಈಡೇರಿಸುತ್ತೇನೆ. ಅದಕ್ಕಾಗಿ ರಸ್ತೆ ನಿಯಮ ಪಾಲನೆ, ಜೂಜು ಬಂದ್, ಮೂಲಭೂತ ಸೌಕರ್ಯಗಳು ಅವಶ್ಯವಿದ್ದು, ಈ ದಿಶೆಯಲ್ಲಿ ಯುವಶಕ್ತಿ ಹಾಗೂ ಜನತೆ ನನಗೆ ಸಹಕಾರ ನೀಡಬೇಕು ಎಂದು ಶಾಸಕ ಪ್ರಕಾಶ ಮನವಿ ಮಾಡಿದರು.
ಪ್ರತಿ 15 ದಿನಕ್ಕೊಮ್ಮೆ ಅವಶ್ಯವಿರುವ ಅಧಿಕಾರಿಗಳ ಜೊತೆ ಗ್ರಾಮ ವಾಸ್ತವ್ಯ ಮಾಡುತ್ತೇನೆ. ನನ್ನನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದ ಬಡಜನರ ಮನೆಗೆ ಹೋಗಿ ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವತ್ತ ಶ್ರಮಿಸುತ್ತೇನೆ. ಇದುವರೆಗೂ ನನ್ನ ತಂದೆ, ಈಗ ನನಗೆ ಒಟ್ಟಾರೆ ನನ್ನ ಮನೆತನಕ್ಕೆ ಐದು ದಶಕಗಳಿಂದ ಪ್ರೀತಿ ತೋರಿಸಿದ್ದೀರಿ. ನಿಮ್ಮ ಆ ಪ್ರೀತಿಗೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ. ನಿಮ್ಮ ಪ್ರೀತಿಯನ್ನು ಹೆಚ್ಚಿಸಿಕೊಳ್ಳುತ್ತೇನೆ ಎಂದು ಶಾಸಕ ಪ್ರಕಾಶ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ವಹಿಸಿದ್ದರು. ಕಾಂಗ್ರೆಸ್ ಮುಖಂಡರುಗಳಾದ ಮಂಜನಗೌಡ ಪಾಟೀಲ, ಬಸನಗೌಡ ಮರದ, ರಾಮಣ್ಣ ನಾಯಕ, ಕೃಷ್ಣಪ್ಪ ಕಂಬಳಿ, ನಾಗರಾಜ ಕುಸಗೂರ, ಬಿ.ಬಿ.ನಂದ್ಯಾಲ, ಶೇಖಪ್ಪ ಬೇಡರ, ಸುಜಾತ ಬಾರ್ಕಿ ಮಾತನಾಡಿದರು.
ಇರ್ಫಾನ್ ದಿಡಗೂರ ಸ್ವಾಗತಿಸಿದರು. ಶೇರು ಕಾಬೂಲಿ ವಂದಿಸಿದರು. ರವಿ ಪಾಟೀಲ, ಸುರೇಶ ಜಾಡಮಾಲಿ, ಗುರುನಾಥ ಕಂಬಳಿ, ಇಕ್ಬಾಲ್ ರಾಣೇಬೆನ್ನೂರು ಮತ್ತಿತರರಿದ್ದರು.