ಧರ್ಮದ ಬಗ್ಗೆ ಜನರಲ್ಲಿ ಅಭಿಮಾನ ಹೆಚ್ಚಾಗಬೇಕು

ಧರ್ಮದ ಬಗ್ಗೆ ಜನರಲ್ಲಿ ಅಭಿಮಾನ ಹೆಚ್ಚಾಗಬೇಕು

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ ಕರೆ

ರಾಣೇಬೆನ್ನೂರು, ಜೂ.5- ಹೆಚ್ಚುತ್ತಿರುವ ವಿದೇಶ ವ್ಯಾಮೋಹದಿಂದಾಗಿ ಇಂದು ಸಂಸ್ಕೃತಿ, ಸಂಸ್ಕಾರ, ಪರಂಪರೆ ಮತ್ತು  ಧರ್ಮದ ಬಗ್ಗೆ ಜನರಲ್ಲಿ ಅಭಿಮಾನ, ಗೌರವ ಕ್ಷೀಣಿಸುತ್ತಿದ್ದು, ಇದನ್ನು ಸಂರಕ್ಷಿಸಲು ಸರ್ವರೂ ಧರ್ಮಾಭಿಮಾನಿಗಳಾಗಿ, ಸಂಸ್ಕಾರವಂತರಾಗಿ ಸೇವೆಗೈಯ್ಯಲು ಮುಂದಾಗಬೇಕು ಎಂದು ಸ್ಥಳೀಯ ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. 

ಸೋಮವಾರದಂದು ಇಲ್ಲಿನ ಹಿರೇಮಠ ಶನೈಶ್ಚರ ಮಂದಿರದಲ್ಲಿ ಏರ್ಪಡಿಸಿದ್ದ ರಾಷ್ಟ್ರದ ಎರಡನೇಯ ಹಾಗೂ ರಾಜ್ಯದ ಮೊದಲನೆಯ  ಶನೇಶ್ವರ ಸ್ವಾಮಿ ಬಯಲು ಆಲಯದ ದ್ವಾದಶ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ಅಷ್ಟಬಂದ ಬ್ರಹ್ಮ ಕಲಶೋತ್ಸವ, ಲೋಕ ಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ನಿರಂತರ ಮೂರು ಮಹಾಮಂಡಲಗಳು ಸೇರಿ ಒಟ್ಟು 593 ದಿನಗಳ ಕಾಲ ನಿರಂತರ ಜರುಗುವ ಧರ್ಮ ಮಹಾಯಜ್ಞದ ಪ್ರಥಮ ಮಂಡಲೋತ್ಸವ, ಮಹಾಸಂಕಲ್ಪ, ಕಂಕಣಧಾರಣೆ, ವಟುಗಳಿಗೆ ಅಯ್ಯಾಚಾರ ಮತ್ತು ಶಿವದೀಕ್ಷೆ ಕಾರ್ಯಕ್ರಮ ಗಳ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಹುತೇಕ ನಾಗರಿಕರಲ್ಲೂ ಸಹ ಈ ತರಹದ ಧರ್ಮದ ಬಗ್ಗೆ ಅಭಿಮಾನ ಕಡಿಮೆ ಯಾಗುತ್ತಿದ್ದು, ಧರ್ಮದ ಪುನರುಜ್ಜೀವನ ಪ್ರತಿ ಕುಟುಂಬದಿಂದ ಸಾಗಬೇಕಾಗಿದೆ. ಅದಕ್ಕಾಗಿ ಮಠ, ಮಂದಿರಗಳು ಧರ್ಮದ ತಳಹದಿಯ ಮೇಲೆ ಸಾಗುವಂತೆ ಭಕ್ತರಿಗೆ ಅರಿವು ಮೂಡಿ ಸುವ ಕಾಯಕದಲ್ಲಿ ತೊಡಗಬೇಕು ಎಂದರು.

ಶ್ರೀಮಠದಲ್ಲಿ ನಡೆಯುವ 593 ದಿನಗಳ ಕಾಲದ ಕಾರ್ಯಕ್ರಮದ ಸಮಾರೋಪಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಇದೊಂದು ಐತಿಹಾಸಿಕ ಮತ್ತು ವಿಶ್ವ ದಾಖಲೆಯ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು. 

ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಪಿ. ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶನೇಶ್ಚರ ಮಠದಲ್ಲಿ ನಡೆಯುವ ಈ ನಿರಂತರ 593 ದಿನಗಳ ಕಾಲದ ಕಾರ್ಯಕ್ರಮ ದಾಖಲೆ ಪುಟದಲ್ಲಿ ಸೇರಲಿದೆ. ಇದರಲ್ಲಿ ಬರುವ ಆಯತ್ ಪೂಜೆ ಬಹು ವಿಶಿಷ್ಟವಾದದ್ದು ಹಾಗೂ ಪ್ರಬಲವಾದ ಶಕ್ತಿ ತುಂಬುವ ಪೂಜೆಯಾಗಿದೆ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ವಿಶ್ವನಾಥ ಹೊರಮಠರನ್ನು ಶ್ರೀಮಠದ ಹಾಗೂ ಭಕ್ತರ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.  

ಸಂಗೊಳ್ಳಿಯ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಹಾವೇರಿಯ ಶ್ರೀ ಅಭಿನವ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಎಸ್.ಎಸ್. ರಾಮಲಿಂಗಣ್ಣನವರ, ರವೀಂದ್ರಗೌಡ ಪಾಟೀಲ ಕೊಟ್ರೇಶಪ್ಪ ಎಮ್ಮಿ, ಪ್ರಶಾಂತ್ ಪಾಟೀಲ, ಅಮರೇಶ ಕೊಂಡಗಳ್ಳಿ, ಬಸವರಾಜ ಹೂಗಾರ, ಮಹಾದೇವಪ್ಪ ಪೂಜಾರ ಸೇರಿದಂತೆ ಶಾಸ್ತ್ರಿಗಳು, ಭಕ್ತರು, ವಟುಗಳು ಮತ್ತಿತರರು ಇದ್ದರು.

error: Content is protected !!