ಜಗಳೂರಿನಲ್ಲಿ ರೈತರಿಂದ ಪ್ರತಿಭಟನೆ
ಜಗಳೂರು, ಜೂ. 1- ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ರಾಜ್ಯ ಸುಗ್ರೀ ವಾಜ್ಞೆ ಹೊರಡಿಸಿ ರಾಜ್ಯಮಟ್ಟದಲ್ಲಿ ಎಂ.ಎಸ್.ಪಿ.ಗೆ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಹೋರಾಟ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ಬೃಹತ್ ಪ್ರತಿಭಟನೆಯ ಮೂಲಕ ಗಾಂಧಿ ವೃತ್ತ, ಹೊಸ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ, ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ಕಚೇರಿಯ ಗೇಟ್ನ ಬಾಗಿಲು ಮುಚ್ಚಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತ ನಾಡಿ, ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ಸುಗ್ರೀವಾಜ್ಞೆ ಹೊರಡಿಸಿ, ರಾಜ್ಯಮಟ್ಟದಲ್ಲಿ ಎಂ.ಎಸ್.ಪಿ.ಗೆ ಕಾಯ್ದೆಯನ್ನು ಜಾರಿಗೆ ತರಬೇಕು. ಇದರಿಂದ ರೈತರು ಬೆಳೆದ ಬೆಳಗಳಿಗೆ ಸ್ವಲ್ಪ ಅನುಕೂಲ ಆಗಲಿದೆ ಎಂದರು.
ಈ ಕಾಯ್ದೆಯನ್ನು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಿದ ಖರೀದಿದಾರರಿಗೆ ಕನಿಷ್ಠ 6 ರಿಂದ 1 ವರ್ಷ ಜೈಲು ಹಾಗೂ ದಂಡ ಮತ್ತು ಪರವಾನಿಗೆ ರದ್ದು ಎಂಬ ಕಾನೂನನ್ನು ಜಾರಿಗೆ ತರಬೇಕು. ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಬೆಂಬಲ ಬೆಲೆಗೆ ರಾಜ್ಯ ಸರ್ಕಾರವು ಬೋನಸ್ ರೂಪದಲ್ಲಿ ಸಹಾಯಧನ ಸೇರಿಸಿ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಹಳ ವರ್ಷಗಳ ಹಿಂದೆ (ಬಿಪಿಎಲ್) ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಗುರುತಿಸುವ ಮಾನ ದಂಡಗಳನ್ನು ರೂಪಿಸುತ್ತಾ, ಅದರಲ್ಲಿ ಮೊಬೈಲ್, ಮೋಟರ್ಬೈಕ್, ಟಿ.ವಿ. ಇರುವ ಆಗಿರಲಿಲ್ಲ. ಆದರೆ ಕಾಲ ಬದಲಾಗಿದೆ. ಬಿಪಿಎಲ್ ಕುಟುಂಬಗಳು ಟಿ.ವಿ. ಮೊಬೈಲ್, ಮೋಟರ್ ಸೈಕಲ್, ಜಮೀನು ಹೊಂದಿರುತ್ತಾರೆ. ಆದ್ದರಿಂದ ಸರ್ಕಾರವು ಬಿಪಿಎಲ್ ಕುಟುಂಬಗಳ ಮಾನದಂಡವನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಅಕಾಲಿಕ ಮಳೆಗೆ ಹಾಗೂ ಸಿಡಿಲಿಗೆ ಬೆಳೆ ಮತ್ತು ಜೀವ ಹಾನಿ ಆಗುತ್ತಿದೆ. ಆದರೆ, ಸರ್ಕಾರದ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಇದುವರೆಗೂ ಬಂದಿಲ್ಲ ಮತ್ತು ವೈಜ್ಞಾನಿಕ ಪರಿಹಾರ ನೀಡಿಲ್ಲ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಲ್ಲನಹೋಳೆ ಚಿರಂಜೀವಿ ಮಾತನಾಡಿ, ರಾಜ್ಯ ಸರ್ಕಾರವು ಕನಿಷ್ಠ ಬೆಂಬಲ ಬೆಲೆಗೆ ರಾಜ್ಯ ಮಟ್ಟದಲ್ಲಿ ಕಾಯ್ದೆಗಳನ್ನು ಜಾರಿಗೆ ತರಬೇಕು. ಎಪಿಎಂಸಿ ಕಾಯ್ದೆಯನ್ನು ಬಲಪಡಿಸಬೇಕು ಹಾಗೂ ಎಪಿಎಂಸಿ ಚುನಾವಣೆ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾನನಕಟ್ಟೆ ತಿಪ್ಪೇಸ್ವಾಮಿ, ಶರಣಪ್ಪ, ತಿಪ್ಪೇಸ್ವಾಮಿ, ಅಂಜಿನಪ್ಪ, ಚಂದ್ರಪ್ಪ, ಸತೀಶ್, ನಿಂಗಪ್ಪ, ಸೂರಪ್ಪ. ಗುರುಸಿದ್ದಾಪುರ ತಿಪ್ಪೇಸ್ವಾಮಿ, ಗೋಗುದ್ದು ಬಸವರಾಜ್, ಮೇಘನಾಥ್, ನಾಗರಾಜ್, ಸಹದೇವರೆಡ್ಡಿ ಸೇರಿದಂತೆ ಮತ್ತಿತರರು ಹಾಜರಿದ್ದರು.