ಅಡಿಕೆ ಬೆಳೆಯಿಂದ ದೂರ ಇರಲು ಸಲಹೆ

ಅಡಿಕೆ ಬೆಳೆಯಿಂದ ದೂರ ಇರಲು ಸಲಹೆ

ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ  ಪ್ರಕಾಶ ಕೋಳಿವಾಡ ಮನವಿ

ರಾಣೇಬೆನ್ನೂರು, ಮೇ 31- ಅಡಿಕೆ ಮಾರುಕಟ್ಟೆ ಕುಸಿದರೆ ರೈತ ಬಹಳಷ್ಟು ನೋವು ಅನುಭವಿಸುವಂತಾಗುತ್ತದೆ. ಹಿಂದೊಮ್ಮೆ  ರೈತರು ಅಡಿಕೆ ಮಾರುಕಟ್ಟೆ ಕುಸಿದಿದ್ದರಿಂದ ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದರು. ಕಾರಣ ಬಯಲುಸೀಮೆಯ ರೈತರು ಈ ದಿಶೆಯಲ್ಲಿ ಚಿಂತನೆ ಮಾಡಿ ಅಡಿಕೆ ಬೆಳೆಯತ್ತ ವಾಲಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಂದು ತಾಪಂ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೋಟಗಾರಿಕೆ ಅಧಿಕಾರಿ ನೂರ್‌ಆಹ್ಮದ್‌ ಹಲಗೇರಿ ಅವರು ತಾಲ್ಲೂಕಿನಲ್ಲಿ 8 ಸಾವಿರ ಎಕರೆ ಅಡಿಕೆ ಬೆಳೆ ಇದೆ ಎಂದಾಗ, ಶಾಸಕರು ಮೇಲಿನಂತೆ ಅಭಿಪ್ರಾಯಿಸಿದರು.  

ಕಾರ್ಮಿಕರ ಸಮಸ್ಯೆಯಿಂದಾಗಿ ರೈತರು, ಕೂಲಿಕಾರರ ಅವಲಂಬಿತ ಬೆಳೆಗಳ ಬದಲು ಅಡಿಕೆ ಬೆಳೆಯುತ್ತಿದ್ದು. ಇದು ಮುಂದಿನ ದಿನಗಳಲ್ಲಿ ಸಂಕಷ್ಟ ತರಬಹುದು ಎಂಬುದನ್ನು ರೈತರ ಮನದಾಳಕ್ಕೆ ತಲುಪುವಂತೆ ತಿಳಿಹೇಳಿ ಇತರೆ ಬೆಳೆಯತ್ತ  ರೈತರ ಗಮನ ಸೆಳೆಯುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು‌ ಎಂದು ಶಾಸಕರು ಹೇಳಿದರು.

ಪ್ರತಿವರ್ಷ ಅವಶ್ಯವಿರುವ ಗೊಬ್ಬರವನ್ನು  ಸರಬರಾಜು ಮಾಡುವಲ್ಲಿ ವಿಳಂಬ ಮಾಡಿದರೆ ಗುತ್ತಿಗೆದಾರರ ಮೇಲೆ ಯಾವುದೇ ಕ್ರಮ ಜರುಗಿಸದಿರುವುದು ಸರಿ ಅಲ್ಲ,  ರೈತ ಅನುಭವಿಸುವ ನೋವು ಗುತ್ತಿಗೆದಾರನಿಗೂ ಗೊತ್ತಾಗಬೇಕು. ಅವನು ಕಾನೂನು ವ್ಯಾಪ್ತಿಯಲ್ಲಿ ತೊಂದರೆ ಅನುಭವಿಸಿದಾಗ ರೈತರ ಕಷ್ಟದ ಅರಿವಾಗುತ್ತದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ಕೃಷಿ ಇಲಾಖೆ ಅಧಿಕಾರಿ ಹಿತೇಂದ್ರ ಗೌಡಪ್ಪಳವರ ಇಲಾಖೆಯ ಪ್ರಗತಿ ಓದಿದಾಗ ಶಾಸಕರು ಪ್ರಸ್ತಾಪಿಸಿದರು. 

ದ್ವಿಪಥದ  ಹಲಗೇರಿ ರಸ್ತೆಯಲ್ಲಿ  ಒಳಚರಂಡಿಯ ಮ್ಯಾನ್ ಹೋಲ್ ಗಳ ಅಳವಡಿಕೆಯಿಂದ ದ್ವಿಚಕ್ರ ವಾಹನ ಸವಾರರು ಅನುಭವಿಸುತ್ತಿರುವ ಅವಘಡಗಳ ಬಗ್ಗೆ  ಪ್ರಸ್ತಾಪಿಸಿದ ಶಾಸಕರು, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿ ಸಾಮರಸ್ಯ ಇಲ್ಲದ್ದರಿಂದ ಸಾರ್ವಜನಿಕರು ತೊಂದರೆಪಡುವಂತಾಗಿದ್ದು, ಜನಕಲ್ಯಾಣದ ಈ ಕಾರ್ಯಕ್ರಮಗಳಿಗೆ ಎಲ್ಲ ಇಲಾಖೆಯವರು ಪರಸ್ಪರ ಸ್ಪಂದಿಸಬೇಕು ಎಂದು ಶಾಸಕರು ಸೂಚಿಸಿದರು.

ಜನಸಂಖ್ಯೆ ಕಡಿಮೆ ಇರುವಲ್ಲಿ 24×7 ಕಾರ್ಯ ನಿರ್ವಹಿಸುವ ಆಸ್ಪತ್ರೆಗಳನ್ನು ಹೆಚ್ಚು ಮಾಡಿ, ಹೆಚ್ಚು ಜನಸಂಖ್ಯೆ ಇರುವಲ್ಲಿ ಕಡಿಮೆ ಆಸ್ಪತ್ರೆ ತೆರೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಇನ್ನೂ ಹೆಚ್ಚು ಆಸ್ಪತ್ರೆ, ಎರಡು ಹಾಸ್ಟೆಲ್ ಮಾಡುವ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುವುದಾಗಿ ತಿಳಿಸಿದರು.ವೇದಿಕೆಯಲ್ಲಿ ಪೌರಾಯಕ್ತ ನಿಂಗಪ್ಪ ಕುಮ್ಮಣ್ಣನವರ, ಶಿಕ್ಷಣಾಧಿಕಾರಿ ಎಂ. ಎಚ್. ಪಾಟೀಲ್, ಕಾರ್ಯನಿರ್ವಾಹಕ ಅಧಿಕಾರಿ ಸುಮಲತಾ, ತಹಶೀಲ್ದಾರ್ ಗುರುಬಸವರಾಜ್ ಇದ್ದರು.

         

error: Content is protected !!