ದಾವಣಗೆರೆ, ಮೇ 27 – ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಪಡೆದಿರುವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ತೋಟಗಾರಿಕೆ ಇಲಾಖೆ ದೊರೆತಿದೆ. ಇದರೊಂದಿಗೆ ದಾವಣಗೆರೆ ಜಿಲ್ಲೆ ಹಾಗೂ ತೋಟಗಾರಿಕೆ ಇಲಾಖೆಯ ನಡುವಿನ ನಂಟು ಮತ್ತೆ ಮುಂದುವರೆದಿದೆ.
ಆಸಕ್ತಿಕರ ಅಂಶ ಎಂದರೆ ಮಲ್ಲಿಕಾರ್ಜುನ್ ಅವರು ಈ ಹಿಂದೆ 2016ರಲ್ಲಿ ತೋಟಗಾರಿಕೆ ಹಾಗೂ ಎ.ಪಿ.ಎಂ.ಸಿ. ಸಚಿವರಾಗಿದ್ದರು.
ಈ ಬಾರಿ ತೋಟಗಾರಿಕೆಯ ಜೊತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೂ ದೊರೆತಿದೆ. ಮಲ್ಲಿಕಾರ್ಜುನ್ ಅವರು 2016ರಲ್ಲಿ ಸಚಿವರಾಗುವುದಕ್ಕೆ ಮುಂಚೆ ಅವರ ತಂದೆ ಶಾಮನೂರು ಶಿವಶಂಕರಪ್ಪನವರು ತೋಟಗಾರಿಕೆ ಹಾಗೂ ಎಪಿಎಂಸಿ ಖಾತೆಯನ್ನು ನಿರ್ವಹಿಸುತ್ತಿದ್ದರು.
ಅದಕ್ಕೂ ಮುಂಚೆ 2008-13ರ ಅವಧಿಯಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಎಸ್.ಎ. ರವೀಂದ್ರನಾಥ್ ಅವರು ಸಚಿವರಾಗಿದ್ದಾಗಲೂ ಅವರಿಗೆ ತೋಟಗಾರಿಕಾ ಇಲಾಖೆ ದೊರೆತಿತ್ತು.
ಕಳೆದ ವಿಧಾನಸಭಾ ಅವಧಿಯಲ್ಲಿ 2018-23ರ ವರೆಗೆ ಜಿಲ್ಲೆಯಿಂದ ಯಾರೂ ಸಚಿವರಾಗಲು ಅವಕಾಶ ದೊರೆತಿರಲಿಲ್ಲ. ಮೊದಲು ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗಲೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ನಂತರ ಆಪರೇಷನ್ ಕಮಲವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಜಿಲ್ಲೆಯಿಂದ ಸಚಿವರಿರಲಿಲ್ಲ. ಎರಡೂ ಸಂದರ್ಭದಲ್ಲಿ ಉಸ್ತುವಾರಿಗೆ ಆಮದು ಸಚಿವರನ್ನು ಅವಲಂಬಿಸಬೇಕಿತ್ತು.
ಐದು ವರ್ಷಗಳ ನಂತರ ಮತ್ತೆ ಜಿಲ್ಲೆಗೆ ಸಚಿವ ಸ್ಥಾನ ದೊರೆತಂತಾಗಿದೆ. ಅದರ ಜೊತೆಗೆ ತೋಟಗಾರಿಕೆಯ ನಂಟು ಮತ್ತೆ ಮುಂದುವರೆದಂತಾಗಿದೆ.