ನವದೆಹಲಿ, ಮೇ 28 – ನೂತನ ಸಂಸತ್ ಕಟ್ಟಡವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ಇದು ಸಶಕ್ತೀಕರಣ, ಕನಸುಗಳ ಬೆಳಗುವ ಹಾಗೂ ಕನಸುಗಳನ್ನು ಸಾಕಾರಗೊಳಿಸುವ ತಾಣವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಪ್ರಧಾನಿ ಮೋದಿ, ಮೊದಲ ಗೇಟ್ ಮೂಲಕ ಸಂಸತ್ತಿನ ಆವರಣ ಪ್ರವೇಶಿಸಿ ದರು. ಲೋಕಸಭಾಧ್ಯಕ್ಷ ಓಂ ಬಿರ್ಲಾ ಪ್ರಧಾನಿಯನ್ನು ಸ್ವಾಗತಿಸಿದರು.
ಕರ್ನಾಟಕದ ಶೃಂಗೇರಿ ಮಠದ ಅರ್ಚಕರು ವೇದ, ಘೋಷಗಳೊಂದಿಗೆ ಪ್ರಧಾನಿಯನ್ನು ಸ್ವಾಗತಿಸಿದರು. ಪ್ರಧಾನಿ ಮೋದಿ ಅವರು ಗಣಪತಿ ಹೋಮ ನೆರವೇರಿಸಿದರು.
ನಂತರ ರಾಜದಂಡಕ್ಕೆ ದೀರ್ಘದಂಡ ನಮಸ್ಕಾರ ಮಾಡಿದ ಮೋದಿ, ತಮಿಳುನಾಡಿನ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಅವರು ರಾಜದಂಡವನ್ನು ಪ್ರಧಾನಿಗೆ ಹಸ್ತಾಂತರಿಸಿದರು. ವೇದ ಘೋಷ ಹಾಗೂ ಮಂಗಳವಾದ್ಯಗಳ ನಡುವೆ ಪ್ರಧಾನಿ ಮೋದಿ ರಾಜದಂಡವನ್ನು ಮೆರವಣಿಗೆ ಯಲ್ಲಿ ತಂದು ನೂತನ ಲೋಕಸಭೆಯ ಸಭಾಧ್ಯಕ್ಷ ಸ್ಥಾನದ ಬಲಭಾಗದಲ್ಲಿ ಅಳವಡಿಸಿದರು.
- ಗಣಹೋಮದೊಂದಿಗೆ ಸಂಸತ್ ಉದ್ಘಾಟನೆ
- ರಾಜದಂಡಕ್ಕೆ ದೀರ್ಘದಂಡ ಪ್ರಣಾಮ
- ವೇದ ಘೋಷಗಳೊಂದಿಗೆ `ನಮೋ’ ಸಂಸತ್ ಪ್ರವೇಶ
ಕಟ್ಟಡಕ್ಕೆ ದೇಶದ ಹಲವೆಡೆಯ ಸಾಮಗ್ರಿಗಳ ಬಳಕೆ
ನವದೆಹಲಿ, ಮೇ 28 – ನೂತನ ಸಂಸತ್ ಭವನದ ನಿರ್ಮಾಣಕ್ಕೆ ಅಗತ್ಯ ವಾದ ಸಾಮಗ್ರಿಗಳನ್ನು ದೇಶದ ವಿವಿಧ ಭಾಗಗಳಿಂದ ತರಿಸಿದ್ದು ವಿಶೇಷವಾಗಿದೆ.
ಮಹಾರಾಷ್ಟ್ರ, ರಾಜಸ್ಥಾನ, ದಮನ್ ಮತ್ತು ಡಿಯು, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಮತ್ತಿತರೆ ಕಡೆಗಳಿಂದ ನಿರ್ಮಾಣಕ್ಕೆ ಅಗತ್ಯ ಸಾಮಗ್ರಿಗಳನ್ನು ತರಿಸಲಾಗಿದೆ. ಹೀಗಾಗಿ ಕಟ್ಟಡವು `ಏಕ್ ಭಾರತ್ ಶ್ರೇಷ್ಠ ಭಾರತದ’ ಪ್ರತೀಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭವನಕ್ಕೆ ಅಗತ್ಯವಾದ ತೇಗದ ಮರ ವನ್ನು ಮಹಾರಾಷ್ಟ್ರದ ನಾಗಪುರದಿಂದ ತರಿಸಲಾಗಿದೆ. ಶಿಲೆಗಳನ್ನು ರಾಜಸ್ಥಾನದ ಸರ್ಮಥುರಾದಿಂದ ತರಲಾಗಿದೆ. ಹಸಿರು ಕಲ್ಲುಗಳನ್ನು ರಾಜಸ್ಥಾನದ ಉದಯಪುರದಿಂದ, ಕೆಂಪು ಕಲ್ಲುಗಳನ್ನು ಅಜ್ಮೀರ ಹಾಗೂ ಬಿಳಿ ಕಲ್ಲುಗಳನ್ನು ಅಂಬಾಜಿಗಳಿಂದ ತರಿಸಲಾಗಿದೆ.
ತಾರಿಸಿಗೆ ಅಗತ್ಯವಾದ ಉಕ್ಕನ್ನು ಕೇಂದ್ರಾಡಳಿತ ಪ್ರದೇಶವಾದ ಡಮನ್ ಮತ್ತು ಡಿಯುದಿಂದ ತರಿಸಲಾಗಿದೆ. ಪೀಠೋಪಕಣಗಳನ್ನು ಮುಂಬೈನಿಂದ ತರಿಸಲಾಗಿದೆ. ಕಲ್ಲಿನ ಜಾಲಿ ಕೆಲಸವನ್ನು ರಾಜಸ್ಥಾನದ ರಾಜನಗರ ಹಾಗೂ ಉತ್ತರ ಪ್ರದೇಶದ ನೋಯ್ಡಾದಲ್ಲಿ ನೆರವೇರಿಸಲಾಗಿದೆ.
ಅಶೋಕ ಸ್ತಂಭದ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಮಹಾ ರಾಷ್ಟ್ರ ಹಾಗೂ ರಾಜಸ್ಥಾನಗಳಿಂದ ತರಿಸ ಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆ ಗಳ ಛೇಂಬರ್ಗಳ ಹೊರ ಭಾಗದಲ್ಲಿ ಅಳವಡಿಸಲಾಗಿರುವ ಬೃಹತ್ ಅಶೋಕ ಚಕ್ರವನ್ನು ಮಧ್ಯ ಪ್ರದೇಶದ ಇಂದೋರ್ನಲ್ಲಿ ರೂಪಿಸಲಾಗಿದೆ.
ಎಂ-ಸ್ಯಾಂಡ್ ಅನ್ನು ಹರಿಯಾಣದ ಚರ್ಖಿ ದಾದ್ರಿಯಿಂದ ತರಿಸಲಾಗಿದೆ. ಹಾರು ಬೂದಿಯ ಇಟ್ಟಿಗೆಗಳನ್ನು ಹರಿಯಾಣ ಮತ್ತು ಉತ್ತರ ಪ್ರದೇಶದಿಂದ ತರಿಸಲಾಗಿದೆ. ನೂತನ ಸಂಸತ್ ಭವನವನ್ನು 1,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಟಾಟಾ ಪ್ರಾಜೆಕ್ಟ್ಸ್ ಸಂಸ್ಥೆಯು ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿತ್ತು.
ನೂತನ ಸಂಸತ್ತಿನಲ್ಲಿ ಅಖಂಡ ಭಾರತ
ನವದೆಹಲಿ, ಮೇ 28 – ನೂತನ ಸಂಸತ್ನಲ್ಲಿ ಸಾಂಸ್ಕೃತಿಕ ಭಾರತದ ಭೂಪಟವನ್ನು ಬಿಂಬಿಸಲಾಗಿದೆ. ಸಾಂಸ್ಕೃತಿಕ ಭಾರತದಲ್ಲಿ ನೆರೆಹೊರೆಯ ದೇಶಗಳ ಭಾಗಗಳೂ ಸೇರಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಅಖಂಡ ಭಾರತದ ಚರ್ಚೆಗೂ ಕಾರಣವಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಸಂಸತ್ ಭವನದಲ್ಲಿ ಸಾಂಸ್ಕೃತಿಕ ಭಾರತದ ಚಿತ್ರವನ್ನು ಗೋಡೆಯ ಮೇಲೆ ಕೆತ್ತಲಾಗಿದೆ.
ಪುರಾತನ ಸಾಂಸ್ಕೃತಿಕ ಭಾರತದ ಈ ಚಿತ್ರದಲ್ಲಿ ಈಗಿನ ಆಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾ ದೇಶದ ಭಾಗಗಳೂ ಇವೆ. ರಾಜ್ಯ ಬಿಜೆಪಿಯು ಈ ಕಲಾಕೃತಿಯನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದೆ.
ಇದು ಟ್ವಿಟ್ಟರ್ನಲ್ಲಿ ಹಲವಾರು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ. ಕೆಲವರು ಇದನ್ನು ಅಖಂಡ ಭಾರತದ ಚಿತ್ರ ಎಂದೂ ಬಣ್ಣಿಸಿದ್ದಾರೆ.
ಭಾರತ ಐತಿಹಾಸಿಕ ಕಾಲದಿಂದ ಯಾವ ರೀತಿಯ ಪ್ರಭಾವ ಬೀರಿತ್ತು ಎಂಬುದನ್ನು ಬಿಂಬಿಸಲಾಗಿದೆ ಎಂದು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನ ಪ್ರಧಾನ ನಿರ್ದೇಶಕ ಅದ್ವೈತ ಗಡನಾಯಕ್ ಹೇಳಿದ್ದಾರೆ. ಗಡನಾಯಕ್ ಅವರು ನೂತನ ಸಂಸತ್ ಕಟ್ಟಡದಲ್ಲಿ ಕಲಾಕೃತಿಗಳ ಆಯ್ಕೆಯಲ್ಲಿ ಭಾಗಿಯಾಗಿದ್ದರು.
ಅಖಂಡ ಭಾರತ ಆರ್.ಎಸ್.ಎಸ್. ಪ್ರತಿಪಾದ ನೆಯಾಗಿದೆ. ಇದರಲ್ಲಿ ಆಪ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ಗಳು ಸೇರಿವೆ. ಆದರೆ, ಅಖಂಡ ಭಾರತವು ರಾಜಕೀಯ ಪರಿಕಲ್ಪನೆಯಲ್ಲ. ಇದು ಸಾಂಸ್ಕೃತಿಕ ಪರಿಕಲ್ಪನೆಯಾಗಿದೆ ಎಂದು ಆರ್.ಎಸ್.ಎಸ್. ಈಗಾಗಲೇ ಸ್ಪಷ್ಟಪಡಿಸಿದೆ.
ನಂತರ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ನೂತನ ಸಂಸತ್ ಕಟ್ಟಡದ ಉದ್ಘಾಟನೆಯಾಗಿದೆ. ಇದು ನಮ್ಮ ಹೃದಯ ಹಾಗೂ ಮನಸ್ಸುಗಳನ್ನು ಹೆಮ್ಮೆ, ಆಶಯ ಹಾಗೂ ಭರವಸೆ ಗಳಿಂದ ತುಂಬಿದೆ. ಈ ಭವ್ಯ ಕಟ್ಟಡವು ಸಶಕ್ತೀಕರಣ, ಕನಸುಗಳ ಬೆಳಗುವ ಹಾಗೂ ಕನಸುಗಳನ್ನು ಸಾಕಾರಗೊಳಿ ಸುವ ತಾಣವಾಗಲಿ. ನಮ್ಮ ಮಹಾನ್ ದೇಶವನ್ನು ಉನ್ನತ ಪ್ರಗತಿಯತ್ತ ಕೊಂಡೊಯ್ಯಲಿ ಎಂದು ಕರೆ ನೀಡಿದರು.
ಉದ್ಘಾಟನಾ ಸಮಾರಂಭದ ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಷಾ, ಎಸ್. ಜೈಶಂಕರ್, ಅಶ್ವಿನಿ ವೈಷ್ಣವ್, ಮನ್ಸುಖ್ ಮಾಂಡವೀಯ ಹಾಗೂ ಜಿತೇಂದ್ರ ಸಿಂಗ್, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡ ಮತ್ತಿತರರು ಉಪಸ್ಥಿತರಿದ್ದರು.
ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆಲ ಕಾರ್ಮಿಕರಿಗೆ ಪ್ರಧಾನಿ ಶಾಲು ಹಾಗೂ ಸ್ಮರಣಿಕೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸರ್ವಧರ್ಮೀಯ ಪ್ರಾರ್ಥನೆಯನ್ನೂ ಆಯೋಜಿಸಲಾಗಿತ್ತು.
ನಂತರ ಪ್ರಧಾನಿ ಮೋದಿ ಅವರು ವಿಧಾನಸಭಾಧ್ಯಕ್ಷರು ಮತ್ತಿತರೆ ಗಣ್ಯರ ಜೊತೆಗೂಡಿ ಹಳೆಯ ಸಂಸತ್ ಭವನಕ್ಕೆ ಭೇಟಿ ನೀಡಿದರು.
ನೂತನ ಸಂಸತ್ ಭವನದ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ 75 ರೂ.ಗಳ ನಾಣ್ಯ ಹಾಗೂ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.